ನವದೆಹಲಿ: 2024ರ ಲೋಕಸಭೆ ಚುನಾವಣೆ ಹಾಗೂ ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದೆ. ಲೋಕಸಭೆ ಚುನಾವಣೆಯ ಜೊತೆಗೆ ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ ಹಾಗೂ ಒಡಿಶಾ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲ ಚುನಾವಣೆಗಳ ಫಲಿತಾಂಶವು ಜೂನ್ 4ರಂದು ಹೊರಬರಲಿದೆ.
ದೆಹಲಿಯಲ್ಲಿ ಇಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕಗಳನ್ನು ಘೋಷಿಸಿದರು. ಲೋಕಸಭೆಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ನಾಲ್ಕುಗಳಲ್ಲಿ ಬೇರೆ-ಬೇರೆ ದಿನಾಂಕಗಳಂದು ಮತದಾನ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: 7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್ 4ಕ್ಕೆ ಫಲಿತಾಂಶ
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಅರುಣಾಚಲ ಪ್ರದೇಶವು 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೆ, ಸಿಕ್ಕಿಂ ರಾಜ್ಯವು 32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. 175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆಗೆ ಮೇ 13ರಂದು ಚುನಾವಣೆ ನಡೆಯಲಿದೆ. 147 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಒಡಿಶಾದಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ಮತದಾನ ಜರುಗಲಿದೆ. ಒಡಿಶಾದಲ್ಲಿ ಮೇ 13, 20, 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತರು ವಿವರಿಸಿದರು.
26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ: ಇದೇ ವೇಳೆ, ದೇಶದ ವಿವಿಧ ರಾಜ್ಯಗಳಲ್ಲಿ ಅನೇಕ ಕಾರಣಗಳಿಂದ ತೆರವಾದ 26 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೂ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಈ ಪೈಕಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ್ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇತ್ತೀಚೆಗೆ ಅವರು ಅಕಾಲಿಕ ನಿಧನ ಹೊಂದಿದ ಹಿನ್ನೆಲೆ ಈ ಕ್ಷೇತ್ರ ತೆರವಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ 97 ಕೋಟಿ ಮತದಾರರು, 12 ರಾಜ್ಯಗಳಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ
ಉಳಿದ ಬಿಹಾರದ ಆಗಿಯಾನ್ ಕ್ಷೇತ್ರ, ಗುಜರಾತ್ನ ವಿಜಪುರ, ಖಾಂಭಟ್, ವಘೋಡಿಯಾ, ಮನದಡರ್, ಪೋರಬಂದರ್, ಹರಿಯಾಣದ ಕರ್ನಾಲ್, ಜಾರ್ಖಂಡ್ನ ಗಂಡೇಯಾ, ಮಹಾರಾಷ್ಟ್ರದ ಅಕೋಲ್ ಪಶ್ಚಿಮ, ತ್ರಿಪುರದಾ ರಾಮನಗರ, ಉತ್ತರ ಪ್ರದೇಶದ ದಾದರೌಲ್, ಲಖನೌ ಪೂರ್ವ, ಗೈನಸಾರಿ, ಡುದ್ಧಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಪ್ರಕಟಿಸಲಾಗಿದೆ.
ಹಿಮಾಚಲದಲ್ಲಿ ಆರು ಕ್ಷೇತ್ರಗಳಿಗೂ ಚುನಾವಣೆ: ಪಶ್ಚಿಮ ಬಂಗಾಳದ ಭಗವಾನ್ಗೋಲಾ, ಬಾರನಗರ್, ತೆಲಂಗಾಣದ ಸಿಕಂದರಾಬಾದ್ ಕಂಟೋನ್ಮೆಂಟ್, ರಾಜಸ್ಥಾನದ ಬಾಗಿದೋರ್, ತಮಿಳುನಾಡಿನ ವಿಲವನ್ಕೋಡ್ ಕ್ಷೇತ್ರಕ್ಕೆ ಚುನಾವಣಾ ದಿನಾಂಕ ಪ್ರಕಟಿಸಲಾಗಿದೆ. ಇದೇ ವೇಳೆ, ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷದ ಆರು ಶಾಸಕರ ಕ್ಷೇತ್ರಗಳಿಗೂ ಉಪಚುನಾವಣೆ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ 27ರಂದು ಏಕೈಕ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ವೇಳೆ, ಕಾಂಗ್ರೆಸ್ನ ಆರು ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಬದಲಿಗೆ ಎದುರಾಳಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದರು. ಇದರಿಂದ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ವಿಧಾನಸಭಾ ಸ್ಪೀಕರ್ ಆರೂ ಜನ ಶಾಸಕರನ್ನೂ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದರ ನಡುವೆಯೇ ಹಿಮಾಚಲದ ಧರ್ಮಶಾಲಾ, ಲಾಹೌಲ್ ಮತ್ತು ಸ್ಪಿತಿ, ಸುಜನ್ಪುರ್, ಬರಸರ್, ಗಾಗ್ರೇಟ್, ಕುತ್ಲೇಹರ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಇದನ್ನೂ ಓದಿ: ನಿಮ್ಮ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ?: ಹಿಮಾಚಲದ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ