ಮುಂಬೈ, ಮಹಾರಾಷ್ಟ್ರ/ರಾಂಚಿ,ಜಾರ್ಖಂಡ್: ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಈ ಬಾರಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ನಾಂದೇಡ್ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ನಡೆಯಲಿದೆ.
ನ.20 ರಂದು ನಡೆದ ಮತದಾನದಲ್ಲಿ 66.05 ರಷ್ಟು ವೋಟಿಂಗ್ ದಾಖಲಾಗಿದೆ. ನಾಂದೇಡ್ ಲೋಕಸಭಾ ಕ್ಷೇತ್ರ ಉಪಚುನಾವಣೆ ಮತದಾನದಲ್ಲಿ ಶೇ.67.81 ರಷ್ಟು ವೋಟಿಂಗ್ ಆಗಿದೆ. ಮತ ಎಣಿಕೆಗೆ ನಾಂದೇಡ್ ಲೋಕಸಭಾ ಉಪಚುನಾವಣೆ ಸೇರಿದಂತೆ ಒಟ್ಟು 288 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಒಟ್ಟು 288 ಮತ ಎಣಿಕೆ ವೀಕ್ಷಕರು ಪ್ರತಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಇದರ ಜೊತೆಗೆ ನಾಂದೇಡ್ ಲೋಕಸಭಾ ಉಪಚುನಾವಣೆಯ ಎಣಿಕೆಗೆ ಇಬ್ಬರು ವೀಕ್ಷಕರನ್ನು ನಿಯೋಜಿಸಲಾಗಿದೆ. ಅಂಚೆ ಮತ ಎಣಿಕೆಗಾಗಿ 1,732 ಟೇಬಲ್‌ಗಳನ್ನು ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ ಮತ ಎಣಿಕೆ ಪ್ರಕ್ರಿಯೆಗಾಗಿ ಇಟಿಪಿಬಿಎಸ್ (Electronically Transmitted Postal Ballot) 592 ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು: ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149, ಶಿವಸೇನೆ (ಶಿಂಧೆ ಬಣ) 81 ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿರೋಧ ಪಕ್ಷದ ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತ ಎಣಿಕೆಗೆ ಸಕಲ ಸಿದ್ಧತೆ: 2019ರ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ.28ರಷ್ಟು ಹೆಚ್ಚಿದೆ. ಈ ಬಾರಿ 4,136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಗರದ ಎಲ್ಲಾ 36 ಮತ ಎಣಿಕೆ ಕೇಂದ್ರಗಳ 300 ಮೀಟರ್ ವ್ಯಾಪ್ತಿಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಆದೇಶವು ನವೆಂಬರ್ 21 ರಂದು ಬೆಳಗ್ಗೆ 6 ರಿಂದ ನವೆಂಬರ್ 24 ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ.
ಮೂರು ಹಂತದ ಭದ್ರತೆ: ಸುಗಮ ಮತ ಎಣಿಕೆಗಾಗಿ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಏರ್ಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಭದ್ರತಾ ಪಡೆಗಳು, ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಟ್ರಾಂಗ್ ರೂಂನಲ್ಲಿರುವ ಇವಿಎಂಗಳು ಸಿಸಿಟಿವಿ ಕಣ್ಗಾವಲಿನಲ್ಲಿದ್ದು, ಅವುಗಳ ದೃಶ್ಯಾವಳಿಗಳನ್ನು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ವೀಕ್ಷಕರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ.
ಬಹುಮತದ ಸಂಖ್ಯೆ 145: ಮಹಾರಾಷ್ಟ್ರ ಅಸೆಂಬ್ಲಿ 288 ಸಂಖ್ಯಾಬಲ ಹೊಂದಿದ್ದು, ಬಹುಮತಕ್ಕೆ 145 ಸ್ಥಾನಗಳನ್ನು ಪಡೆಯಬೇಕು.
ಜಾರ್ಖಂಡ್ನಲ್ಲಿ ಗೆಲುವು ಯಾರಿಗೆ? 81 ಸದಸ್ಯ ಬಲದ ಜಾರ್ಖಂಡ್ ಅಸೆಂಬ್ಲಿ ಚುನಾವಣೆ ನ.13 ಮತ್ತು ನ.20ರಂದು 2 ಹಂತಗಳಲ್ಲಿ ನಡೆದಿತ್ತು. ಜಾರ್ಖಂಡ್ನಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆದರೆ, ಉಳಿದ 38 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಚುನಾವಣೆಯಲ್ಲಿ ಶೇ. 67.74ರಷ್ಟು ಮತದಾನವಾಗಿದೆ.
ಜಾರ್ಖಂಡ್ನಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು ಎನ್ಡಿಎಗೆ ತೀವ್ರ ಪೈಪೋಟಿ ನೀಡಲಿದೆ ಎನ್ನಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು: ಜಾರ್ಖಂಡ್ನಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅದರ ಮೈತ್ರಿ ಪಾಲುದಾರ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್‌ಯು) 10 ಸ್ಥಾನಗಳಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಎರಡು ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕೇವಲ ಒಂದು ಸ್ಥಾನದಲ್ಲಿ ಸ್ಪರ್ಧಿಸಿದೆ. ಇಂಡಿಯಾ ಬ್ಲಾಕ್ ಘಟಕಗಳ ಪೈಕಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 41 ಸ್ಥಾನಗಳಲ್ಲಿ, ಕಾಂಗ್ರೆಸ್ 30, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 6 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) 4 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ವೀಕ್ಷಕರನ್ನು ನೇಮಿಸಿದೆ. ನಿಷ್ಪಕ್ಷಪಾತವಾಗಿ ಮತ ಎಣಿಕೆ ಪ್ರಕ್ರಿಯೆ ನಡೆಸಲು ಪ್ರತಿ ಎಣಿಕೆ ಟೇಬಲ್‌ಗೆ ಒಬ್ಬ ಎಆರ್‌ಒ ನೇಮಿಸಲಾಗಿದೆ. ಅಭ್ಯರ್ಥಿಗಳ ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8ರಿಂದ ಅಂಚೆ ಮತಗಳ ಎಣಿಕೆ ಆರಂಭವಾಗಲಿದ್ದು, ನಂತರ ಇವಿಎಂಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ಕ್ಷೇತ್ರಗಳ ಮೇಲಿದೆ ಎಲ್ಲರ ಕಣ್ಣು: ಈ ಚುನಾವಣೆಯಲ್ಲಿ ಪ್ರಮುಖ ನಾಯಕರ ಭವಿಷ್ಯವನ್ನು ನಿರ್ಧರಿಸುವ ಕೆಲವು ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಿಎಂ ಹೇಮಂತ್ ಸೊರೇನ್ ಬರ್ಹೈತ್ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಗಂಡೆ ಕ್ಷೇತ್ರದಿಂದ ಅವರ ಪತ್ನಿ ಕಲ್ಪನಾ ಸೊರೆನ್, ಚಂದನ್ಕಿಯಾರಿ ಕ್ಷೇತ್ರದಿಂದ ಜಾರ್ಖಂಡ್ ಬಿಜೆಪಿ ನಾಯಕ ಮತ್ತು ಪ್ರತಿಪಕ್ಷದ ನಾಯಕ ಅಮರ್ ಕುಮಾರ್ ಬೌರಿ ಚಂದನ್ಕಿಯಾರಿ, ಸರೈಕೆಲಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಚಂಪೈ ಸೊರೆನ್ ಕಣದಲ್ಲಿದ್ದಾರೆ.
ಇದನ್ನೂ ಓದಿ: ಸ್ವತಂತ್ರ ಅಭ್ಯರ್ಥಿಗಳಿಗೆ 50 ರಿಂದ 100 ಕೋಟಿ 'ಮಹಾಯುತಿ' ಆಫರ್: ಸಂಜಯ್ ರಾವತ್ ಆರೋಪ