ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಇಂಡಿಯಾ ಬ್ಲಾಕ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿವಸೇನೆ-ಯುಬಿಟಿ ಮತ್ತು ಎನ್‌ಸಿಪಿ-ಎಸ್‌ಪಿ ನಾಯಕರು ಮಹಾರಾಷ್ಟ್ರದಲ್ಲಿ ಅಭ್ಯರ್ಥಿಗಳ ಪರ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡಲು, ಆಮ್ ಆದ್ಮಿ ಪಕ್ಷವನ್ನು ಸಂಪರ್ಕಿಸಿದ್ದಾರೆ. AAP ಸ್ವಯಂಸೇವಕ ನೆಲೆಯನ್ನು ಹೊಂದಿರುವ ಮತ್ತು MVA ಅಭ್ಯರ್ಥಿಗಳು ವಿವಾದಾತ್ಮಕ ಹಿನ್ನೆಲೆಯನ್ನು ಹೊಂದಿರದ ವಿಧಾನಸಭಾ ಕ್ಷೇತ್ರಗಳಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡುವ ಸಾಧ್ಯತೆಯಿದೆ. ಕೇಜ್ರಿವಾಲ್ ಜೊತೆಗೆ, ಇತರ ಹಿರಿಯ ಎಎಪಿ ನಾಯಕರು ಸಹ ಎಂವಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಎಂಎಂ ಅಭ್ಯರ್ಥಿಗಳ ಪರ ಕೇಜ್ರಿ ಕ್ಯಾಂಪೇನ್: ಮೂಲಗಳ ಪ್ರಕಾರ, ಕೇಜ್ರಿವಾಲ್ ಅವರು ಜಾರ್ಖಂಡ್‌ನಲ್ಲಿ ಜೆಎಂಎಂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಸಾಧ್ಯತೆಯಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮನವಿ ಎಲ್ಲಿ ಇಂಡಿಯಾ ಬ್ಲಾಕ್ಗೆ ಮತಗಳಾಗಿ ಬದಲಾಗುತ್ತವೆಯೋ ಅಂತಹ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ವಿಶೇಷವಾಗಿ ನಗರ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಜಾರಿಯಾದ ಹಿನ್ನೆಲೆ ಕಳೆದ ತಿಂಗಳು ಕೇಜ್ರಿವಾಲ್ ತಿಹಾರ್ ಜೈಲಿನಿಂದ ಹೊರಬಂದಿದ್ದರು. ಜೈಲಿನಿಂದ ಹೊರಬಂದ ನಂತರ ಆಶ್ಚರ್ಯಕರ ನಡೆಯಂತೆ, ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಮತ್ತು ಸಾರ್ವಜನಿಕರು ಎಎಪಿಯನ್ನು ಮತ್ತೆ ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ "ಪ್ರಾಮಾಣಿಕತೆಯ ಪ್ರಮಾಣಪತ್ರ" ನೀಡುವವರೆಗೆ ತಾವು ಯಾವುದೇ ಸ್ಥಾನವನ್ನು ಅಲಂಕರಿಸುವುದಿಲ್ಲ ಎಂದು ಹೇಳಿದರು.
ನವೆಂಬರ್ 20 ರಂದು ಮಹಾರಾಷ್ಟ್ರ ಚುನಾವಣೆ: ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು, ಎಲ್ಲಾ 288 ಕ್ಷೇತ್ರಗಳಿಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಪ್ರಮುಖ ಚುನಾವಣಾ ಸ್ಪರ್ಧೆ ಎರಡು ಮೈತ್ರಿಕೂಟಗಳ ನಡುವೆ ನಡೆಯಲಿದೆ. ಬಿಜೆಪಿ, ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆಯನ್ನೊಳಗೊಂಡ ಮಹಾಯುತಿ ಮೈತ್ರಿ. ಇನ್ನೊಂದು ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಒಳಗೊಂಡ ಎಂವಿಎ ಮೈತ್ರಿ.
ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಜಾರ್ಖಂಡ್‌ನಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು), ಜನತಾ ದಳ (ಯುನೈಟೆಡ್) (ಜೆಡಿ-ಯು), ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ಮತ್ತೊಂದೆಡೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.
ಇದನ್ನೂ ಓದಿ: ಮಹಾ ಚುನಾವಣೆ: ರಾತ್ರೋರಾತ್ರಿ 45 ಸದಸ್ಯರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಏಕ್ನಾಥ್ ಶಿಂಧೆ!