ಚೆನ್ನೈ(ತಮಿಳುನಾಡು): ತಮಿಳುನಾಡು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೆ.ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಚೆನ್ನೈನ ಮಾಧವರಂನಲ್ಲಿ ಭಾನುವಾರ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿತ ರೌಡಿ ತಿರುವೆಂಗಡಂ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಮ್‌ಸ್ಟ್ರಾಂಗ್‌ನ ಹತ್ಯೆಯ ನಂತರ ಚೆನ್ನೈನ ಮಾಧವರಂ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿ ತಿರುವೆಂಗಡಂನನ್ನು ತನಿಖೆಗೆ ಕರೆದೊಯ್ದಿದ್ದರು. ಆದರೆ, ಸ್ಥಳದಲ್ಲಿ ತಿರುವೆಂಗಡಂ ಬಚ್ಚಿಟ್ಟಿದ್ದ ಕಂಟ್ರಿ ಗನ್‌ನಿಂದ ಪೊಲೀಸ್ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಆತ್ಮರಕ್ಷಣೆಯ ಸಲುವಾಗಿ ಎನ್ಕೌಂಟರ್ ನಡೆಸಲಾಯಿತು ಎಂದು ತಿಳಿದುಬಂದಿದೆ.
ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕೆ1 ಸೆಂಬಿಯಂ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಬಂಧಿತ ದಾಳಿಕೋರ ತಿರುವೆಂಗಡಂನನ್ನು ಸ್ಥಳಕ್ಕೆ ಕರೆದೊಯ್ದು ಬಚ್ಚಿಟ್ಟಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದರು.
ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ರೌಡಿ ತಿರುವೆಂಗಡಂ ದೇಹದ ಬಲ ಭುಜ ಮತ್ತು ಎದೆಯ ಭಾಗದಲ್ಲಿ ಗುಂಡು ತಗುಲಿದೆ. ಬಳಿಕ, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಈಗಾಗಲೇ 2 ಕೊಲೆ ಪ್ರಕರಣ ಸೇರಿದಂತೆ 5 ಪ್ರಕರಣಗಳು ದಾಖಲಾಗಿದ್ದವು.