ಅಮರಾವತಿ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಹತ್ಯೆ ಬೆದರಿಕೆ ಹಾಕಲಾಗಿದೆ. ಅವರ ಕಚೇರಿಗೆ ಬಂದ ಅನಾಮಧೇಯ ಕರೆಯಲ್ಲಿ ವ್ಯಕ್ತಿಯೊಬ್ಬ ಅಶ್ಲೀಲವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಡಿಸಿಎಂ ಕಚೇರಿಗೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ಪದೇ ಪದೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಹಲವಾರು ಅಶ್ಲೀಲ ಸಂದೇಶಗಳನ್ನೂ ರವಾನಿಸಿದ್ದಾನೆ. ಕಚೇರಿ ಸಿಬ್ಬಂದಿ ತಕ್ಷಣ ಪವನ್ ಕಲ್ಯಾಣ್ ಅವರಿಗೆ ಘಟನೆಯ ಮಾಹಿತಿ ನೀಡಿದ್ದಾರೆ.
ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಕಚೇರಿಗೆ ಬಂದ ಡಿಸಿಎಂ ಪವನ್, ಕರೆ ಮಾಡಿರುವ ಸಂಖ್ಯೆ, ನಿಂದನೆ ಮತ್ತು ಬೆದರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿ, ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ವಿಜಯವಾಡದಿಂದ ಬಂದ ಕರೆ: ಬೆದರಿಕೆ ಹಾಕಲಾದ ಸಂಪರ್ಕ ಸಂಖ್ಯೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದು, ಅದು ಎನ್ಟಿಆರ್ ಜಿಲ್ಲೆಯ ತಿರುವೂರ್ನ ಮಲ್ಲಿಕಾರ್ಜುನ್ ರಾವ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಆದರೆ, ಕರೆ ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಸ್ಟೇಡಿಯಂನಲ್ಲಿರುವ ಟವರ್‌ನಿಂದ ಬಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಸದ್ಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆರೋಪಿಗೆ ಶೋಧ ನಡೆಸುತ್ತಿದ್ದಾರೆ. ಪೊಲೀಸ್ ಆಯುಕ್ತ ರಾಜಶೇಖರ್ ಬಾಬು ನೇತೃತ್ವದಲ್ಲಿ ಟಾಸ್ಕ್ ಫೋರ್ಸ್, ವಿಶೇಷ ದಳ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ. ವಿಜಯವಾಡದ ಜೊತೆಗೆ ಎನ್ಟಿಆರ್ ಜಿಲ್ಲೆಯ ತಿರುವೂರಿನಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ವಯನಾಡ್ ದುರಂತದಲ್ಲಿ ಇಡೀ ಕುಟುಂಬ, ಅಪಘಾತದಲ್ಲಿ ಭಾವಿ ಪತಿಯನ್ನೂ ಕಳೆದುಕೊಂಡ ಯುವತಿಗೆ ಸಿಕ್ತು ಸರ್ಕಾರಿ ಉದ್ಯೋಗ