ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ವಿಧಾನಸಭೆ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ಪರವಾಗಿ ಪುಲಿವೆಂದುಲದಿಂದ ವೈಎಸ್‌ಆರ್‌ಸಿಪಿ ನಾಯಕರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಜಗನ್ಮೋಹನ್ ರೆಡ್ಡಿ ಕಡಪ ಜಿಲ್ಲೆಯ ಪುಲಿವೆಂದುಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಈ ವೇಳೆ ಅವರು ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನೂ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 25 ರಂದು ವೈಯಕ್ತಿಕವಾಗಿ ಮತ್ತೊಂದು ಸೆಟ್ ನಾಮಪತ್ರವನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇಕಡಾ 41 ರಷ್ಟು ಏರಿಕೆ ಕಂಡಿದೆ. ಪ್ರಸ್ತುತ ಅವರು 529. 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಕಟಿಸಿದ್ದಾರೆ. 2022-23 ನೇ ಸಾಲಿನಲ್ಲಿ 57.75 ಕೋಟಿ ರೂಪಾಯಿಗಳ ಆದಾಯವನ್ನೂ ಘೋಷಣೆ ಮಾಡಿಕೊಂಡಿದ್ದಾರೆ. 2019 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಗನ್ ಅವರು 375.20 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಅಫಿಡವಿಟ್ ಪ್ರಕಾರ, ಜಗನ್ ಅವರ ಪತ್ನಿ ಭಾರತಿ ರೆಡ್ಡಿ ಅವರು 176.30 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಭಾರತಿ ಅವರ ಬಳಿ 6.4 ಕೆಜಿ ಚಿನ್ನ ಮತ್ತು ವಜ್ರಗಳಿದ್ದು, ಇದರ ಮಾರುಕಟ್ಟೆ ಮೌಲ್ಯ 5.30 ಕೋಟಿ ರೂ. ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಜಗನ್ ಮತ್ತು ಅವರ ಪತ್ನಿಯ ಹೆಚ್ಚಿನ ಆಸ್ತಿ ಅವರು ವಿವಿಧ ಕಂಪನಿಗಳಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಸಿಎಂ ವಿರುದ್ಧ 26 ಎಫ್‌ಐಆರ್: ಸಿಎಂ ಜಗನ್ ಅವರ ಹೆಸರಿನಲ್ಲಿ 26 ಎಫ್ಐಆರ್ಗಳು ದಾಖಲಾಗಿವೆ. ಇದರಲ್ಲಿ ಹೆಚ್ಚಿನವುಗಳು ಅವರು ಸಿಎಂ ಆಗುವ ಮೊದಲು ಸಿಬಿಐ ಮತ್ತು ಇಡಿ ದಾಖಲಿಸಿದ್ದ ಕೇಸ್ಗಳಾಗಿವೆ.
ಆಂಧ್ರದಲ್ಲಿ ಅತ್ಯಂತ ಸಿರಿವಂತ ಅಭ್ಯರ್ಥಿ ಇವರು - ವಿಧಾನಸಭೆ ಜೊತೆಗೆ ರಂಗೇರಿದ ಲೋಕ ಅಖಾಡ: ಆಂಧ್ರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಸೋಮವಾರ 112 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಗುಂಟೂರು ಲೋಕಸಭೆ ಸ್ಪರ್ಧಿಸುತ್ತಿರುವ ಟಿಡಿಪಿ ಅಭ್ಯರ್ಥಿ ವಿಶೇಷ ಗಮನ ಸೆಳೆದಿದ್ದಾರೆ. ಇಲ್ಲಿಮ ಟಿಡಿಪಿ ಅಭ್ಯರ್ಥಿ ಪೆಮ್ಮಸಾನಿ ಚಂದ್ರಶೇಖರ್ ಅವರು ಕುಟುಂಬದ ಆಸ್ತಿ ಒಟ್ಟಾರೆ 5,785 ಕೋಟಿ ರೂ ಇರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಇವರು ಶ್ರೀಮಂತ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ನಾಮಪತ್ರ ಸಲ್ಲಿಕೆಯೊಂದಿಗೆ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಚಂದ್ರಶೇಖರ್ ಅವರ ವೈಯಕ್ತಿಕ ಆಸ್ತಿ 2,448.72 ಕೋಟಿ ರೂ.ಗಳಾಗಿದ್ದು, ಅವರ ಪತ್ನಿ 2,343.78 ಕೋಟಿ ರೂ. ಮತ್ತು ಮಕ್ಕಳು ಸುಮಾರು 1,000 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅವರ ಪತ್ನಿಯೊಂದಿಗೆ ಜಂಟಿ ಫೈಲಿಂಗ್ ಸಲ್ಲಿಸಿರುವ ಅವರು ಅಮೆರಿಕದಲ್ಲಿ ಜನವರಿ 2022 ರಿಂದ ಡಿಸೆಂಬರ್ 2022 ರವರೆಗಿನ ಅಮೆರಿಕದ ಆರ್ಥಿಕ ವರ್ಷದಂತೆ 605.57 ಕೋಟಿ ರೂ.ಗಳನ್ನು ಘೋಷಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇವರ ಕುಟುಂಬವು ಅಮೆರಿಕದಲ್ಲಿ ಜೆಪಿ ಮೋರ್ಗನ್ ಚೇಸ್ ಬ್ಯಾಂಕ್ನಲ್ಲಿ ಸುಮಾರು 1138 ಕೋಟಿ ರೂ ಸಾಲ ಹೊಂದಿರುವುದಾಗಿ ಹೇಳಿಕೊಂಡಿದೆ.
ಚಂದ್ರಶೇಖರ್ ಅವರು ವೈದ್ಯರಾಗಿದ್ದು, 1999 ರಲ್ಲಿ ಎನ್‌ಟಿಆರ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ವಿಜಯವಾಡದಲ್ಲಿ MBBS ವ್ಯಾಸಂಗ ಮಾಡಿದ್ದಾರೆ. 2005 ರಲ್ಲಿ ಪೆನ್ಸಿಲ್ವೇನಿಯಾದ ಡ್ಯಾನ್‌ವಿಲ್ಲೆಯಲ್ಲಿರುವ ಗೀಸಿಂಗರ್ ವೈದ್ಯಕೀಯ ಕೇಂದ್ರದಿಂದ MD ಪದವಿ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು ಲೋಕಸಭೆಯ 25 ಸ್ಥಾನಗಳಿಗೆ ಮೇ 13ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.