ಅಮರಾವತಿ: ಆಂಧ್ರ ಪ್ರದೇಶದಲ್ಲಿ ಈ ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ದೇಶದ ಪ್ರಸಿದ್ಧ, ಶ್ರೀಮಂತ ಹಿಂದೂ ದೇವಾಲಯ ತಿರುಪತಿ ತಿರುಮಲದ ಬಾಲಾಜಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ತಿರುಮಲ ಲಡ್ಡಿನಲ್ಲಿ ತುಪ್ಪದ ಬದಲಾಗಿ ಪ್ರಾಣಿಗಳ ಕೊಬ್ಬು ಸೇರಿಸಲಾಗುತ್ತಿತ್ತು ಎಂದು ಬುಧವಾರ ನಡೆದ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಹೇಳಿದ್ದಾರೆ. ಇದೀಗ ಲಡ್ಡಿಗೆ ಶುದ್ಧ ತುಪ್ಪ ಬಳಕೆ ಮಾಡಲಾಗುತ್ತಿದೆ. ದೇಗುಲದಲ್ಲಿ ಎಲ್ಲವನ್ನೂ ಶುಚಿಗೊಳಿಸಲಾಗಿದ್ದು, ಗುಣಮಟ್ಟ ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಹಿರಿಯ ವೈಎಸ್ಆರ್ಸಿಪಿ ನಾಯಕ ಮತ್ತು ಮಾಜಿ ಟಿಟಿಡಿ ಮುಖ್ಯಸ್ಥ ವೈ.ವಿ.ಸುಬ್ಬಾ ರೆಡ್ಡಿ ಪ್ರತಿಕ್ರಿಯಿದ್ದು, "ಸಿಎಂ ಹೇಳಿಕೆ ದುರುದ್ದೇಶದಿಂದ ಕೂಡಿದೆ. ರಾಜಕೀಯ ಲಾಭಕ್ಕೆ ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಆಂಧ್ರ ಪ್ರದೇಶ ಐಟಿ ಸಚಿವರಾಗಿರುವ ನಾರಾ ಲೋಕೇಶ್ ಈ ವಿಷಯದಲ್ಲಿ ಜಗನ್ ಮೋಹನ್ ರೆಡ್ಡಿ ಆಡಳಿತವನ್ನು ಗುರಿಯಾಗಿಸಿದ್ದಾರೆ. ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇಗುಲ ನಮ್ಮ ಪವಿತ್ರ ದೇಗುಲವಾಗಿದೆ. ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ತಿರುಪತಿ ಪ್ರಸಾದಕ್ಕೆ ತುಪ್ಪದ ಬದಲಾಗಿ ಪ್ರಾಣಿ ಕೊಬ್ಬು ಸೇರಿಸಲಾಗುತ್ತಿತ್ತು ಎಂಬ ವಿಚಾರ ಕೇಳಿ ಆಘಾತವಾಯಿತು. ಈ ಹಿಂದಿನ ವೈಎಸ್ಆರ್ಸಿಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಲೋಕೇಶ್ ಆರೋಪಿಸಿದ್ದು, ಅವರು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಯನ್ನು ಗೌರವಿಸಿಲ್ಲ. ದೇಗುಲದ ಪಾವಿತ್ರ್ಯತೆಯ ಜೊತೆಗೆ ಹಿಂದೂಗಳ ನಂಬಿಕೆಯನ್ನು ಗಂಭೀರವಾಗಿ ಹಾನಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: 'ಒಂದು ರಾಷ್ಟ್ರ, ಒಂದು ಚುನಾವಣೆ‘ ವರದಿಗೆ ಕೇಂದ್ರ ಅನುಮೋದನೆ: ಖರ್ಗೆ ವಿರೋಧ