ನವದೆಹಲಿ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಜನರಿಗೆ ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹೊಸ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೋರಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಉಚಿತಗಳನ್ನು ತಡೆಯುವಂತೆ ಕೋರಿ ಶ್ರೀನಿವಾಸನ್ ಅರ್ಜಿ: ವಕೀಲ ಶ್ರೀನಿವಾಸನ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ಚುನಾವಣಾ ಪೂರ್ವ ಅವಧಿಯಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಭರವಸೆಗಳನ್ನು ನೀಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
"ಯಾವುದೇ ನಿಯಂತ್ರಣವಿಲ್ಲದೇ ಉಚಿತ ಕೊಡುಗೆಗಳನ್ನು ಘೋಷಿಸುವುದರಿಂದ ಸಾರ್ವಜನಿಕ ಬೊಕ್ಕಸದ ಮೇಲೆ ಗಮನಾರ್ಹ ಮತ್ತು ಲೆಕ್ಕವಿಲ್ಲದ ಆರ್ಥಿಕ ಹೊರೆ ಉಂಟಾಗುತ್ತದೆ. ಇದಲ್ಲದೆ, ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಈಡೇರಿಸುವ ವಿಚಾರದಲ್ಲಿ ಯಾವುದೇ ನಿಯಮಾವಳಿಗಳಿಲ್ಲ" ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿದ ಸುಪ್ರೀಂ: ಇದೇ ವಿಚಾರದಲ್ಲಿ ಈ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಗಳೊಂದಿಗೆ ಹೊಸ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ಒಟ್ಟುಗೂಡಿಸಿದೆ. ವಕೀಲ ಮತ್ತು ಪಿಐಎಲ್ ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಈ ವಿಷಯದ ಬಗ್ಗೆ ತುರ್ತು ವಿಚಾರಣೆಯನ್ನು ಕೋರಿದ ನಂತರ ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಉಚಿತ ಕೊಡುಗೆಗಳನ್ನು ನೀಡುವ ಅಭ್ಯಾಸದ ವಿರುದ್ಧದ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಈ ಹಿಂದೆ ಒಪ್ಪಿಕೊಂಡಿತ್ತು.
ಈ ಅರ್ಜಿಯಲ್ಲಿ ಮಾಡಿರುವ ಮನವಿ ಏನು?: ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಉಚಿತ ಕೊಡುಗೆಗಳ ಘೋಷಣೆಯು ಸಂವಿಧಾನ ಬಾಹಿರವಾಗಿರುವುದರಿಂದ ಇಂಥ ಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪಾಧ್ಯಾಯ ಅವರ ಮನವಿಯಲ್ಲಿ ತಿಳಿಸಲಾಗಿದೆ.
ಚುನಾವಣೆಗೆ ಮುಂಚಿತವಾಗಿ ಸಾರ್ವಜನಿಕ ಬೊಕ್ಕಸದಿಂದ ತರ್ಕಬದ್ಧವಲ್ಲದ ಉಚಿತ ಕೊಡುಗೆಗಳ ಭರವಸೆಯು ಮತದಾರರ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ, ಚುನಾವಣೆಯ ಸಮತೋಲನವನ್ನು ಭಂಗಗೊಳಿಸುತ್ತದೆ ಮತ್ತು ಮತದಾನ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳುಮಾಡುತ್ತದೆ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ರಾಜಕೀಯ ಪಕ್ಷಗಳ ಇತ್ತೀಚಿನ ಪ್ರವೃತ್ತಿಯು ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ದೊಡ್ಡ ಬೆದರಿಕೆಯಾಗಿದೆ ಮಾತ್ರವಲ್ಲದೆ ಸಂವಿಧಾನದ ಸ್ಫೂರ್ತಿಗೆ ಹಾನಿ ಮಾಡುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಇದನ್ನೂ ಓದಿ : ಬಿಷ್ಣೋಯ್ ಹಿಟ್ಲಿಸ್ಟ್ನಲ್ಲಿ ಬಾಬಾ ಸಿದ್ದಿಕಿ ಪುತ್ರ: ಯಾರೇ ಸಿಕ್ಕರೂ ಹತ್ಯೆ ಮಾಡಲು ಬಂದಿತ್ತು ಆದೇಶ!