ಅನ್ನಮಯ್ಯ ಜಿಲ್ಲೆ (ಆಂಧ್ರಪ್ರದೇಶ): ಮದುವೆ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಮಗಳು ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿ, ಸುಳ್ಳು ಕಥೆ ಕಟ್ಟಿರುವ ಘಟನೆ ಜಿಲ್ಲೆಯ ಮದನಪಲ್ಲಿಯಲ್ಲಿ ಇದೇ ತಿಂಗಳ 13ರಂದು ನಡೆದಿದೆ. ಈ ಕೊಲೆ ಪ್ರಕರಣದ ವಿವರವನ್ನು ಡಿಎಸ್‌ಪಿ ಪ್ರಸಾದ ರೆಡ್ಡಿ ಬಹಿರಂಗಪಡಿಸಿದ್ದಾರೆ
ಮದನಪಲ್ಲಿ ಪಿ ಆ್ಯಂಡ್ ಟಿ ಕಾಲೋನಿ ನಿವಾಸಿಯಾಗಿದ್ದ ನಿವೃತ್ತ ಶಿಕ್ಷಕ ದೊರಸ್ವಾಮಿ (62) ಮಗಳಿಂದ ಹತ್ಯೆಗೀಡಾಗಿದ್ದಾರೆ. ಅವರ ಪತ್ನಿ ಲತಾ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಿಎಸ್ಸಿ ಮತ್ತು ಬಿಇಡಿ ಓದಿರುವ ತಮ್ಮ ಒಬ್ಬಳೇ ಮಗಳು ಹರಿತಾ ಮತ್ತು ದೊರಸ್ವಾಮಿ ಇಬ್ಬರೇ ಮನೆಯಲ್ಲೇ ವಾಸಿಸುತ್ತಿದ್ದರು.
ದೊರಸ್ವಾಮಿ ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ಆಕೆಯ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತಾಯಿಯ ಒಡವೆಗಳನ್ನೂ ಸಹ ಮಗಳಿಗೆ ಹಸ್ತಾಂತರಿಸಿದ್ದರು. ಆದ್ರೆ ಮಗಳು ಹರಿತಾ ಮಾತ್ರ ದಾರಿ ತಪ್ಪಿದ್ದಳು. ರಮೇಶ್ ಎಂಬ ಯುವಕನಿಗೆ ಹರಿತಾ ಹತ್ತಿರವಾಗಿದ್ದು, ತನ್ನ ಚಿನ್ನಾಭರಣಗಳನ್ನು ನೀಡಿದ್ದಳು. ಆದ್ರೆ ರಮೇಶ ಬಂಗಾರದ ಆಭರಣಗಳನ್ನು ಒತ್ತೆ ಇಟ್ಟು ರೂ.11.40 ಲಕ್ಷ ಸಾಲ ಪಡೆದಿದ್ದ. ಅಷ್ಟೇ ಅಲ್ಲ, ಸಾಯಿಕೃಷ್ಣ ಎಂಬ ಮತ್ತೊಬ್ಬ ಯುವಕನಿಗೆ 8 ಲಕ್ಷ ರೂ. ಸಾಲ ಸಹ ಕೊಟ್ಟಿದ್ದಳು. ಇವರಿಬ್ಬರಲ್ಲದೆ ಹರೀಶ್ ರೆಡ್ಡಿಗೂ ಈಕೆ ಆಪ್ತಳಾಗಿದ್ದಳು.
ಈ ವಿಷಯ ತಿಳಿದ ದೊರಸ್ವಾಮಿ ಒಂದು ಒಳ್ಳೆಯ ಸಂಬಂಧ ನೋಡಿ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಆದ್ರೆ ಹರಿತಾ ಮದುವೆಗೆ ನಿರಾಕರಿಸಿದ್ದಳು. ಈ ವಿಚಾರಕ್ಕೆ ಕಳೆದ ಒಂದು ತಿಂಗಳಿಂದ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಅನುಕ್ರಮದಲ್ಲಿ ಇದೇ ತಿಂಗಳ 13 ರಂದು ಮನೆಯಲ್ಲಿದ್ದ ವಸ್ತುಗಳಿಂದ ತಂದೆ ದೊರಸ್ವಾಮಿಯ ತಲೆಗೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ತೀವ್ರ ಗಾಯಗೊಂಡ ದೊರಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಡಿಎಸ್ಪಿ ತಿಳಿಸಿದ್ದಾರೆ.
ಕೊಲೆಯಾದ ದಿನ ಕಿರುಚಾಟದ ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ದೊರಸ್ವಾಮಿ ಮನೆಗೆ ಬಂದಿದ್ದಾರೆ. ಆಗ ದೊರಸ್ವಾಮಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಹರಿತಾಗೆ ವಿಚಾರಿಸಿದ್ದಾರೆ. ಆ ಸಮಯದಲ್ಲಿ ತಂದೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಹರಿತಾ ಹೇಳಿದ್ದಾಳೆ. ಬಳಿಕ ಪೊಲೀಸರಿಗೂ ಇದೇ ವಿಷಯ ತಿಳಿಸಿದ್ದಳು. ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದಾಗ ಹರಿತಾ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ರಿಮಾಂಡ್‌ಗೆ ಒಪ್ಪಿಸಿದ್ದಾರೆ.