ಹೈದರಾಬಾದ್: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದ ಧಾರ್ಮಿಕ ತುಳಿತಕ್ಕೊಳಗಾಗಿರುವ ಮುಸ್ಲಿಮೇತರ ಸಮುದಾಯದವರಿಗೆ ಭಾರತದ ಪೌರತ್ವ ನೀಡಲು ಉದ್ದೇಶಿಸಿ ಜಾರಿ ಮಾಡಲಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಮತ್ತೆ ವಾಪಸ್ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದಲ್ಲಿನ ಅರ್ಹ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡುವುದು ಭಾರತ ಸರ್ಕಾರದ ಸಾರ್ವಭೌಮ ಹಕ್ಕು ಮತ್ತು ಅದರಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದರ ಜೊತೆಗೆ ನುಸುಳುಕೋರರು ಮತ್ತು ನಿರಾಶ್ರಿತರ ನಡುವಿನ ವ್ಯತ್ಯಾಸ ಇಲ್ಲಿ ಬಯಲಾಗಲಿದೆ ಎಂದು ಅವರು ಹೇಳಿದರು.
ಧರ್ಮ ವಿಭಜನೆ ಬೇಡ: ವಿಪಕ್ಷಗಳಿಗೆ ಈ ಕಾನೂನಿನ ಮಹತ್ವ ತಿಳಿದಿಲ್ಲ. ರಾಜಕೀಯ ಮಾಡಲು ಹಲವಾರು ವಿಷಯಗಳಿವೆ. ಇದು ಪೌರತ್ವ ನೀಡುವ ಕಾಯ್ದೆ, ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಬಾಂಗ್ಲಾದೇಶದಿಂದ ಬಂದ ಬಂಗಾಳಿ ಹಿಂದೂಗಳನ್ನು ವಿರೋಧಿಸಬೇಡಿ. ಅವರಂತೆ ನೀವು ಬಂಗಾಳಿಯೇ. ನಿರಾಶ್ರಿತರಿಗೆ ಮುಕ್ತ ಅವಕಾಶ ನೀಡಿ. ಕೇವಲ ಭಯ ಸೃಷ್ಟಿಸುವ ಮೂಲಕ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದೂ ಮುಸ್ಲಿಮರ ನಡುವೆ ವಿಭಜನೆ ಸೃಷ್ಟಿ ಮಾಡಬೇಡಿ ಎನ್ನುವ ಮೂಲಕ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಟೀಕಿಸಿದರು.
ಕೆಲ ರಾಜ್ಯಗಳು ಸಿಎಎ ಜಾರಿ ಮಾಡುವುದಿಲ್ಲ. ಪೌರತ್ವಕ್ಕಾಗಿ ಅರ್ಜಿ ಹಾಕಬೇಡಿ ಎಂದು ಜನರಿಗೆ ಕರೆ ನೀಡುತ್ತಿವೆ. ಹೀಗೆ ಮಾಡಿದಲ್ಲಿ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ. ಸರ್ಕಾರಗಳು ಜನರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ವಲಸಿಗರನ್ನು ಮೂಲೆಗುಂಪು ಮಾಡಿದಂತಾಗುತ್ತದೆ ಎಂದು ಶಾ ಹೇಳಿದರು.
ಮೋದಿಗೆ 'ಎ ಗ್ರೇಡ್' ನೀಡಿದ ಶಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 10 ವರ್ಷಗಳ ಆಡಳಿತಕ್ಕೆ ಗೃಹ ಸಚಿವರು ಎ ಗ್ರೇಡ್ ನೀಡಿದರು. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಮಾಡಲು 25 ವರ್ಷಗಳ ದೂರದೃಷ್ಟಿಯ ಯೋಜನೆ ರೂಪಿಸಿದ್ದಾರೆ. ಮುಂದಿನ 25 ವರ್ಷಗಳಲ್ಲಿ 145 ಕೋಟಿ ಜನಸಂಖ್ಯೆಯ ದೇಶವನ್ನು ಶ್ರೇಷ್ಠವಾಗಿಸಲು ಬದ್ಧತೆ ಮತ್ತು ಸನ್ನದ್ಧತೆಯ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.
ಸಿಎಎ ಪರಿಚಯ: ನೆರೆ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಧಾರ್ಮಿಕ ತುಳಿತಕ್ಕೊಳಗಾಗಿ ಭಾರತಕ್ಕೆ 2014 ರ ಡಿಸೆಂಬರ್ 31 ರ ಮೊದಲು ಬಂದ ಮುಸ್ಲಿಮೇತರ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಭಾರತೀಯ ಪೌರತ್ವ ಪಡೆಯಲು ಈ ಕಾನೂನು ನೆರವು ನೀಡಲಿದೆ. ಇದು ಪೌರತ್ವ ನೀಡುವ ಕಾನೂನಾಗಿದೆ.
ಇದನ್ನೂ ಓದಿ: ಸಿಎಎ: ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಹೊಸ ಪೋರ್ಟಲ್ ಆರಂಭ, ಯಾವೆಲ್ಲ ದಾಖಲೆಗಳು ಬೇಕು?