ಜಮ್ಮು: ಬಿಗಿ ಭದ್ರತಾ ವ್ಯವಸ್ಥೆಗಳೊಂದಿಗೆ ಇಂದು ಯಾತ್ರಾರ್ಥಿಗಳ ಮೊದಲ ತಂಡ ಅಮರನಾಥ ಯಾತ್ರೆ ಪ್ರಾರಂಭಿಸಿದೆ. ಪವಿತ್ರ ಅಮರನಾಥ ಯಾತ್ರಿಕರ ಮೊದಲ ತಂಡ ಅವಳಿ ಬೇಸ್ ಕ್ಯಾಂಪ್‌ಗಳಾದ ನುನ್ವಾನ್ ಪಹಲ್ಗಾಮ್‌ನಿಂದ ಚಂದನವಾಡಿ ಮತ್ತು ಸೋನ್ಮಾರ್ಗ್ ಕಡೆ ಪ್ರಯಾಣ ಪ್ರಾರಂಭಿಸಿದೆ. ಯಾತ್ರಿಕರು 'ಹರ್ ಹರ್ ಮಹಾದೇವ್ ಬಮ್ ಬಮ್ ಬೋಲೆ' ಎಂಬ ಘೋಷಣೆಗಳೊಂದಿಗೆ ಭಗವಾನ್ ಶಿವನ ವಾಸಸ್ಥಾನ ಅಮರನಾಥ ಗುಹೆಯತ್ತ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.
#WATCH | J&K: A large number of pilgrims en route from Baltal to Holy Amarnath cave. pic.twitter.com/u9hdwn7c95
— ANI (@ANI) June 29, 2024
ಭಾವಪರವಶರಾದ ಯಾತ್ರಾರ್ಥಿಗಳು ಮುಂಜಾನೆಯೇ ಅಮರನಾಥ ಗುಹೆಯ ಕಡೆಗೆ ತಮ್ಮ ಪ್ರಯಾಣ ಪ್ರಾರಂಭಿಸಿದ್ದಾರೆ. ತಮಗಾಗಿ ಮಾಡಿರುವ ಸೂಕ್ತ ವ್ಯವಸ್ಥೆಗಳನ್ನು ಕಂಡ ಯಾತ್ರಿಕರು ಬಹಳ ಸಂತೋಷಪಟ್ಟಿದ್ದಾರೆ. ಯಾತ್ರೆಯ ನೋಡಲ್ ಅಧಿಕಾರಿ, ಜಿಲ್ಲಾ ಅಭಿವೃದ್ಧಿ ಆಯುಕ್ತ ಅನಂತ್ನಾಗ್ ಸೈಯದ್ ಫಖರ್ ಉದ್ ದಿನ್ ಹಮೀದ್ ಅವರು ಸಿವಿಲ್ ಮತ್ತು ಪೊಲೀಸ್ ಆಡಳಿತದ ಅಧಿಕಾರಿಗಳೊಂದಿಗೆ ನುನ್ವಾನ್ ಬೇಸ್ ಕ್ಯಾಂಪ್ ಪಹಲ್ಗಾಮ್‌ನಿಂದ ಯಾತ್ರಾರ್ಥಿಗಳ ಬ್ಯಾಚ್‌ಗೆ ಚಾಲನೆ ನೀಡಿದರು.
ನಿನ್ನೆ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಲ್ಲಿನ ಭಗವತಿ ನಗರ ಶಿಬಿರದಲ್ಲಿ 'ವಾರ್ಷಿಕ ಅಮರನಾಥ ಯಾತ್ರೆ'ಗೆ ಯಾತ್ರಿಕರ ಮೊದಲ ಬ್ಯಾಚ್‌ಗೆ ಗ್ರೀನ್ ಸಿಗ್ನಲ್ ನೀಡಿದರು. ಬಹು ಭದ್ರತಾ ವ್ಯವಸ್ಥೆಗಳ ನಡುವೆ 4,603 ಯಾತ್ರಾರ್ಥಿಗಳ ಮೊದಲ ಬ್ಯಾಚ್ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಶಿವನ ಗುಹೆಗೆ ಪ್ರಯಾಣ ಕೈಗೊಂಡರು.
ಈವರೆಗೆ 3.5 ಲಕ್ಷ ಯಾತ್ರಾರ್ಥಿಗಳು ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ವರ್ಷ ಅಮರನಾಥ ಯಾತ್ರೆ 52 ದಿನಗಳ ಕಾಲ ನಡೆಯಲಿದೆ. ದಕ್ಷಿಣ ಮತ್ತು ಮಧ್ಯ ಕಾಶ್ಮೀರದ ಪ್ರವಾಸಿ ಸ್ಥಳಗಳಾದ ಪಹಲ್ಗಾಮ್ ಮತ್ತು ಸೋನ್ಮಾರ್ಗ್‌ನಲ್ಲಿರುವ ಅವಳಿ ಬೇಸ್ ಕ್ಯಾಂಪ್‌ಗಳಿಂದ ಲಕ್ಷಗಟ್ಟಲೆ ಯಾತ್ರಿಕರು ಯಾತ್ರೆ ಕೈಗೊಳ್ಳುವ ನಿರೀಕ್ಷೆಯಿದೆ.