ವಿಜಯವಾಡ, ಆಂಧ್ರಪ್ರದೇಶ: ರಾಜಧಾನಿ ಅಮರಾವತಿಯನ್ನು ಭಾರತದ ಡ್ರೋನ್ ನಗರವನ್ನಾಗಿ ಅಭಿವೃದ್ಧಿಪಡಿಸಲು 'ಅಮರಾವತಿ ಡ್ರೋನ್ ಶೃಂಗಸಭೆ -2024'ಯನ್ನು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೇ ಅಕ್ಟೋಬರ್ 22 ಮತ್ತು 23 ರಂದು ಮಂಗಳಗಿರಿಯಲ್ಲಿ ಎರಡು ದಿನಗಳ ಕಾಲ ಡ್ರೋನ್ ಶೃಂಗಸಭೆ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 400 ಪ್ರತಿನಿಧಿಗಳ ಜೊತೆಗೆ ಐಐಟಿಗಳು, ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಇತರ ವೃತ್ತಿಪರರು ಸೇರಿ 1000 ಜನ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
2030ರ ವೇಳೆಗೆ ಜಾಗತಿಕ ಡ್ರೋನ್ ಹಬ್: ರಾಜ್ಯ ಸರ್ಕಾರವು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ, ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಸಿಐಐ ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸುತ್ತಿದೆ. ಡ್ರೋನ್ ತಂತ್ರಜ್ಞಾನದಲ್ಲಿ 40 ಶೋರೂಂಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಸಮಿತಿಯು 2030ರ ವೇಳೆಗೆ ಭಾರತವನ್ನು ಜಾಗತಿಕ ಡ್ರೋನ್ ಹಬ್ ಮಾಡಲು ಡ್ರೋನ್ ಶೃಂಗಸಭೆ -2024 ರಲ್ಲಿ ಚರ್ಚಿಸಲಾಗುತ್ತದೆ. ಕೃಷಿ, ಶಿಕ್ಷಣ, ಆರೋಗ್ಯ, ಲಾಜಿಸ್ಟಿಕ್ಸ್, ಮ್ಯಾಪಿಂಗ್, ಸಮೀಕ್ಷೆ, ಸಾರ್ವಜನಿಕ ಸುರಕ್ಷತೆ ಮತ್ತು ಡಿಜಿಟಲ್ ಭೂ ದಾಖಲೆಗಳಂತಹ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಬಳಕೆಯ ಕುರಿತು ಕೂಡ ಚರ್ಚೆಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರ ಹೇಳಿ ಕೊಂಡಿದೆ.
ದೇಶದ ಅತಿ ದೊಡ್ಡ ಡ್ರೋನ್ ಶೋ: 5,500 ಡ್ರೋನ್‌ಗಳೊಂದಿಗೆ ದೇಶದ ಅತಿ ದೊಡ್ಡ ಡ್ರೋನ್ ಶೋ ವಿಜಯವಾಡದ ಬೆರಂ ಪಾರ್ಕ್‌ನಲ್ಲಿ 22 ರಂದು ಸಂಜೆ ನಡೆಯಲಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು, ಸಚಿವ ಬಿ.ಸಿ.ಜನಾರ್ದನರೆಡ್ಡಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಶೃಂಗಸಭೆಯ ನಿರ್ವಹಣೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರಬ್ ಕುಮಾರ್ ಪ್ರಸಾದ್ ಅವರು ತಮ್ಮ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
6,000 ಕೋಟಿ ಆದಾಯ ಗುರಿ: ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಡ್ರೋನ್ ಕ್ಷೇತ್ರದಲ್ಲಿ ಪ್ರಮುಖವಾಗಿ ರೂಪಿಸುವ ಆಶಯವನ್ನು ಸರ್ಕಾರ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ ರೂ. 2,000 ಕೋಟಿ ಹೂಡಿಕೆ ಮತ್ತು ವ್ಯಾಪಾರದ ಮೂಲಕ ರೂ. 6,000 ಕೋಟಿ ಆದಾಯ ಗುರಿ ಹಂದಿದೆ. ಇದು 20,000ಕ್ಕೂ ಹೆಚ್ಚು ಯುವಕರಿಗೆ ಡ್ರೋನ್ ಪೈಲಟ್‌ಗಳಾಗಿ ತರಬೇತಿ ನೀಡಲು ಮತ್ತು ಕನಿಷ್ಠ 30,000 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಕೂಡ ಇದೆ.
ಇದನ್ನೂ ಓದಿ: ನಾಗರಿಕ ಸೇವೆಯಲ್ಲಿ ಡ್ರೋನ್ ಸೇವೆ ಬಳಕೆ; ಆಂಧ್ರ ಪ್ರದೇಶ ಸರ್ಕಾರದ ಚಿಂತನೆ