ಕಣ್ಣೂರು (ಕೇರಳ): ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮನೆಯಿಂದಲೇ ಮತದಾನದ ಪ್ರಕ್ರಿಯೆ ವೇಳೆ ಮತ್ತೊಂದು ಅಕ್ರಮ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮತಗಟ್ಟೆ ಅಧಿಕಾರಿ, ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದೇಶಾದ್ಯಂತ 18ನೇ ಲೋಕಸಭೆಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಚುನಾವಣಾ ನಿಯಮಗಳಂತೆ, 75 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಮನೆಯಿಂದಲೇ ಮತದಾನ ಮಾಡಬಹುದು. ಈ ವೇಳೆ ಯಾವುದೇ ಪಕ್ಷದ ಪೋಲಿಂಗ್ ಏಜೆಂಟ್‌ಗಳು ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಸಹಾಯ ಮಾಡುವಂತಿಲ್ಲ. ಆದರೆ, ಕಣ್ಣೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 70ನೇ ಬೂತ್‌ನಲ್ಲಿ ಮನೆಯಿಂದ ಮತದಾನ ಪ್ರಕ್ರಿಯೆ ವೇಳೆ ಬೋಗಸ್ ಮತದಾನ ನಡೆದಿದೆ ಎಂದು ಸಿಪಿಎಂ ದೂರು ನೀಡಿದೆ.
ಬಿಕೆಪಿ ಅಪಾರ್ಟ್ಮೆಂಟ್ನಲ್ಲಿ ಏಪ್ರಿಲ್ 15ರಂದು 82 ವರ್ಷದ ಕೆ. ಕಮಲಾಕ್ಷಿ ಎಂಬುವರ ಮನೆಗೆ ಮತ ಪಡೆಯಲು ಚುನಾವಣಾ ಅಧಿಕಾರಿಗಳು ತೆರಳಿದಾಗ ಮತದಾನ ಮಾಡಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಯಾದ ಕೆ.ಗೀತಾ ಕಾಂಗ್ರೆಸ್ ಸಹಾನುಭೂತಿ ಹೊಂದಿದ್ದಾರೆ. ಗೀತಾ ನಕಲಿ ಮತ ಚಲಾಯಿಸಲು ಸಹಕರಿಸಿದ್ದಾರೆ. ಯುಡಿಎಫ್‌ಗೆ ಮತಗಳನ್ನು ಪಡೆಯಲು ಗೀತಾ ಉದ್ದೇಶಪೂರ್ವಕವಾಗಿ ಬಿಎಲ್‌ಒ ಸೋಗು ಹಾಕಿಕೊಂಡಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಬಿಎಲ್‌ಒ ಸೇರಿ ಇಬ್ಬರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಅಮಾನತುಗೊಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗೆ ಸಹಾಯಕ ಜಿಲ್ಲಾಧಿಕಾರಿ ಅನೂಪ್ ಗರ್ಗ್, ಜಿಲ್ಲಾ ಕಾನೂನು ಅಧಿಕಾರಿ ಎ. ರಾಜ್ ಮತ್ತು ಸಹಾಯಕ ಚುನಾವಣಾಧಿಕಾರಿ ಆರ್.ಶ್ರೀಲತಾ ಅವರನ್ನು ನೇಮಿಸಿ, 24 ಗಂಟೆಯೊಳಗೆ ತನಿಖಾ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ ಇದು ಎರಡನೇ ಘಟನೆಯಾಗಿದೆ. ಈ ಹಿಂದೆ ಕಾಸರಗೋಡು ಲೋಕಸಭಾ ಕ್ಷೇತ್ರದ ಬೂತ್ ನಂ.164ರ ವ್ಯಾಪ್ತಿಯಲ್ಲಿ ಬರುವ 92 ವರ್ಷ ವಯಸ್ಸಿನ ದೇವಿ ಎಂಬುವರಿಗೆ ಸಿಪಿಐ-ಎಂ ಮುಖಂಡ ಗಣೇಶನ್ ಮತ ಚಲಾಯಿಸಲು ಸಹಾಯ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ವಿಶೇಷ ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಹಾಯಕ, ಮೈಕ್ರೋ ವೀಕ್ಷಕ, ವಿಶೇಷ ಪೊಲೀಸ್ ಅಧಿಕಾರಿ ಮತ್ತು ವಿಡಿಯೋಗ್ರಾಫರ್ನನ್ನು ಡಿಸಿ ಅಮಾನತುಗೊಳಿಸಿದ್ದರು.
ಇದನ್ನೂ ಓದಿ: 92ರ ವೃದ್ಧೆಯ ಮತದಾನಕ್ಕೆ ನೆರವಾಗಲು ಸಿಪಿಎಂ ಮುಖಂಡನಿಗೆ ಅವಕಾಶ; ಐವರು ಸಿಬ್ಬಂದಿ ಸಸ್ಪೆಂಡ್