ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವೇ 'ನಿಜವಾದ ಎನ್‌ಸಿಪಿ' ಎಂದು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಗುರುವಾರ ಘೋಷಿಸಿದರು. ಇದೇ ವೇಳೆ, ಅಜಿತ್ ಪವಾರ್ ಗುಂಪಿನ ಶಾಸಕರ ಅರ್ಹತೆಯನ್ನೂ ಅವರು ಎತ್ತಿಹಿಡಿದ್ದಾರೆ.
ಸ್ಪೀಕರ್ ತೀರ್ಪಿನಿಂದ ಪಕ್ಷದ ಸಂಸ್ಥಾಪಕರಾದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ''ಅಜಿತ್ ಪವಾರ್ ಬಣವು 43 ಶಾಸಕರು ಮತ್ತು ಆರು ಜನ ವಿಧಾನ ಪರಿಷತ್ ಸದಸ್ಯರ ಬೆಂಬಲ ಹೊಂದಿದೆ. ಹೀಗಾಗಿ ಪಕ್ಷವು ಶರದ್ ಪವಾರ್ ಅವರ ಅಣ್ಣನ ಮಗನಾದ ಅಜಿತ್ ಪವಾರ್ ಅವರಿಗೆ ಸೇರಿದೆ'' ಎಂದು ಸ್ಪೀಕರ್ ಆದೇಶಿಸಿದ್ದಾರೆ.
ಅಷ್ಟೇ ಅಲ್ಲ, ''ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಎನ್‌ಸಿಪಿ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಸಂವಿಧಾನದ 10ನೇ ಅನುಚ್ಛೇದದ ನಿಬಂಧನೆಗಳ ದುರುಪಯೋಗ ಸ್ಪಷ್ಟವಾಗಿ ಕಂಡುಬಂದಿದೆ. ಶರದ್ ಪವಾರ್ ಅವರ ನಿರ್ಧಾರವನ್ನು ಪ್ರಶ್ನಿಸುವುದು ಅಥವಾ ಅವರ ಇಚ್ಛೆಯನ್ನು ಧಿಕ್ಕರಿಸುವುದು ಪಕ್ಷಾಂತರವಾಗಲು ಸಾಧ್ಯವಿಲ್ಲ. ಪಕ್ಷದ ನಾಯಕತ್ವವು ಅನರ್ಹಗೊಳಿಸುವ ಬೆದರಿಕೆಯ ಮೂಲಕ ಹೆಚ್ಚಿನ ಸಂಖ್ಯೆಯ ಸದಸ್ಯರ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು 10ನೇ ಅನುಚ್ಛೇದವನ್ನು ಬಳಸಲು ಸಹ ಆಗುವುದಿಲ್ಲ'' ಎಂದು ಸಭಾಧ್ಯಕ್ಷ ನಾರ್ವೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ-ಚುನಾವಣಾ ಆಯೋಗ; ಶರದ್ ಪವಾರ್‌ಗೆ ಹಿನ್ನಡೆ
ಮುಂದುವರೆದು, ''ಎನ್‌ಸಿಪಿಯ ಅಧ್ಯಕ್ಷರು ಯಾರು ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. 1999ರಲ್ಲಿ ಶರದ್ ಪವಾರ್ ಅವರು ಸ್ಥಾಪಿಸಿದ್ದ ಎನ್‌ಸಿಪಿ 2023ರ ಜೂನ್ 30ರಂದು ವಿಭಜನೆಯಾಗಿದೆ. ಅಲ್ಲಿಯವರೆಗೆ ಯಾವುದೇ ವಿವಾದ ಇರಲಿಲ್ಲ'' ಎಂದೂ ಸ್ಪೀಕರ್ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಶರದ್ ಪವಾರ್ ಸ್ಥಾಪಿಸಿದ್ದ ಎನ್‌ಸಿಪಿ ವಿರುದ್ಧ ಬಂಡಾಯವೆದ್ದಿದ್ದ ಅಜಿತ್ ಪವಾರ್ ಹಿರಿಯ ನಾಯಕರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ, ಈ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿ, ತಮ್ಮ ಕೆಲ ಬಂಬಲಿಗರು ಶಾಸಕರಾಗಿ ಅಧಿಕಾರದಲ್ಲಿದ್ದಾರೆ. ಎನ್‌ಸಿಪಿಯ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಹಸನ್ ಮುಶ್ರಿಫ್, ಛಗನ್ ಭುಜಬಲ್ ಅವರಂತಹ ಬೆಂಬಲವನ್ನೂ ಅಜಿತ್ ಹೊಂದಿದ್ದಾರೆ.
ಪಕ್ಷ ಇಬ್ಭಾಗವಾದ ಬಳಿಕ ನಿಜವಾದ ಬಣ ಮತ್ತು ಶಾಸಕರ ಅನರ್ಹತೆ ನಿರ್ಧರಿಸಲು ವಿಧಾನಸಭೆ ಅಧ್ಯಕ್ಷರ ಬಳಿ ಶರದ್ ಪವಾರ್ ಬಣದಿಂದ ಮೂರು ಅರ್ಜಿಗಳು ಹಾಗೂ ಅಜಿತ್ ಪವಾರ್ ಬಣದಿಂದ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಇವುಗಳ ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಲಾಗಿದೆ. ಈ ಹಿಂದೆ ಕೇಂದ್ರ ಚುನಾವಣಾ ಆಯೋಗ ಸಹ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಹೇಳಿ, ಪಕ್ಷದ ಚಿಹ್ನೆಯಾದ 'ಗೋಡೆ ಗಡಿಯಾರ'ವನ್ನೂ ಹಂಚಿಕೆ ಮಾಡಿತ್ತು.
ಇದನ್ನೂ ಓದಿ: 'ಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ': ಇಸಿ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋದ ಶರದ್ ಪವಾರ್