ನವದೆಹಲಿ: ಏರ್ ಇಂಡಿಯಾ ಸಂಸ್ಥೆಯು ಇಸ್ರೇಲ್‌ಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೆಡೆ ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದ್ದರೆ, ಈ ನಡುವೆ ಹಿಜ್ಬುಲ್ಲಾ ಮತ್ತು ಇರಾನ್ ಮಧ್ಯಪ್ರವೇಶಿಸುತ್ತಿವೆ.
ಆಗಸ್ಟ್ 2ರಿಂದ ಆಗಸ್ಟ್ 8ರ ವರೆಗೆ ಟೆಲ್ ಅವಿವ್ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಪರಿಸ್ಥಿತಿ ಅವಲೋಕಿಸಿ ಸೇವೆಗಳನ್ನು ಮರುಸ್ಥಾಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.
ಆಗಸ್ಟ್ 8ರ ವರೆಗೆ ದೆಹಲಿ-ಟೆಲ್ ಅವೀವ್ ನಡುವಿನ ಪ್ರಯಾಣಕ್ಕಾಗಿ ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ವಿನಾಯಿತಿ ಘೋಷಿಸಲಾಗಿದೆ. ಟಿಕೆಟ್ ರದ್ದುಗೊಳಿಸುವುದು ಮತ್ತು ಮರುಹೊಂದಾಣಿಕೆ ಮಾಡುವಾಗ ಒಮ್ಮೆ ಶುಲ್ಕ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ದೆಹಲಿ ಮತ್ತು ಟೆಲ್ ಅವಿವ್ ನಡುವೆ ನಾಲ್ಕು ವಾರದ ಸೇವೆಗಳನ್ನು ನಿರ್ವಹಿಸುತ್ತಿದೆ. ಕಳೆದ ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ನಂತರ, ಏರ್ ಇಂಡಿಯಾ ಸುಮಾರು ಐದು ತಿಂಗಳ ಕಾಲ ಟೆಲ್ ಅವೀವ್ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು.
ಹಮಾಸ್ ನಾಯಕರ ಹತ್ಯೆ: ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್, ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಡೀಫ್ ಅವರನ್ನು ಇತ್ತೀಚಿಗೆ ಹತ್ಯೆ ಮಾಡಲಾಗಿತ್ತು. ಅಲ್ಲದೇ ಲೆಬನಾನ್‌ನ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಫಾದ್ ಶುಕ್ರ್ ಇಸ್ರೇಲಿ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ಲೆಬನಾನ್ ಈಗಾಗಲೇ ಹಲವಾರು ರಾಕೆಟ್‌ಗಳನ್ನು ಇಸ್ರೇಲ್ ಪ್ರದೇಶದತ್ತ ಉಡಾಯಿಸುತ್ತಿದೆ. ಇದಕ್ಕೆ ಇಸ್ರೇಲ್‌ನಿಂದಲೂ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಇಸ್ರೇಲ್ ಪರ ನಿಲ್ಲುವುದಾಗಿ ಅಮೆರಿಕ ಈಗಾಗಲೇ ಭರವಸೆ ನೀಡಿದೆ. ಇದರಿಂದ ಪರಿಸ್ಥಿತಿ ಗಂಭೀರವಾಗ ತೊಡಗಿದೆ.