ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯ ನಡುವೆ, ಢಾಕಾದಿಂದ 199 ಪ್ರಯಾಣಿಕರು ಮತ್ತು ಆರು ಶಿಶುಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಬುಧವಾರ ಮುಂಜಾನೆ ದೆಹಲಿಗೆ ಬಂದಿಳಿದಿದೆ. ಢಾಕಾ ವಿಮಾನ ನಿಲ್ದಾಣದಲ್ಲಿ ನಿನ್ನೆ ತಡರಾತ್ರಿ ಮೂಲಸೌಕರ್ಯ ಸವಾಲುಗಳ ನಡುವೆಯೂ ಏರ್ ಇಂಡಿಯಾ ವಿಶೇಷ ಚಾರ್ಟರ್ ಫ್ಲೈಟ್ ಅನ್ನು ಕಡಿಮೆ ಸಮಯದಲ್ಲಿ ನಿರ್ವಹಿಸಿತು ಮತ್ತು ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ ಪ್ರಯಾಣಿಕ ಅರ್ಪಿತ್, ಈಗ ಹಿಂಸಾಚಾರವನ್ನು ಸಾಕಷ್ಟು ನಿಯಂತ್ರಣಕ್ಕೆ ತರಲಾಗಿದೆ. ಕಾರ್ಖಾನೆಗಳು, ಕಚೇರಿಗಳು, ಬ್ಯಾಂಕ್‌ಗಳು, ಕಾಲೇಜುಗಳು, ಶಾಲೆಗಳು ಸೇರಿದಂತೆ ನಾಳೆಯಿಂದ ಎಲ್ಲವೂ ಸಂಪೂರ್ಣವಾಗಿ ಕೆಲಸ ಮಾಡಲಿದೆ ಎಂದರು. ಒಂದು ಸಮುದಾಯದ ಜನರನ್ನು ಗುರಿಯಾಗಿಸಿಕೊಂಡಿರುವ ವರದಿಗಳ ಕುರಿತು ಮಾತನಾಡಿದ ಅವರು, ಇಲ್ಲ, ಎಲ್ಲವೂ ಸರಿಯಾಗಿದೆ. ಭಾರತೀಯರಿಗೆ ಯಾವುದೇ ಅಪಾಯವಿಲ್ಲ. ವಿಮಾನಯಾನ ಸಂಸ್ಥೆಗಳು ಸಹ ತೆರೆಯಲ್ಪಟ್ಟಿವೆ. ನನ್ನ ಕುಟುಂಬಸ್ಥರು ಚಿಂತಿತರಾಗಿದ್ದರು. ಹೀಗಾಗಿ ನಾನು ನನ್ನ ಕುಟುಂಬವನ್ನು ನೋಡಲು ಬಂದಿದ್ದೇನೆ ಎಂದು ಹೇಳಿದರು.
ಶೇಖ್ ಹಸೀನಾ ದೇಶ ತೊರೆದಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಬುದ್ಧಿವಂತ ಜನರು ಈ ರೀತಿ ಮಾಡಿದ್ದು ತಪ್ಪು. ಅವರು ಅದನ್ನು ನಂತರ ಅರಿತುಕೊಳ್ಳುತ್ತಾರೆ. ಎರಡು ಮೂರು ದಿನಗಳ ನಂತರ ನಾನು ಬಾಂಗ್ಲಾದೇಶಕ್ಕೆ ಹಿಂತಿರುಗುತ್ತೇನೆ ಎಂದು ಅರ್ಪಿತ್ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಈಗ ಪರಿಸ್ಥಿತಿ ತಿಳಿಯಾಗಿದೆ; ಬಾಂಗ್ಲಾದೇಶದಿಂದ ದೆಹಲಿಗೆ ಬಂದಿಳಿದ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಸೌರದೀಪ್ ರಾಯ್ ಮಾತನಾಡಿ, ಆ ದೇಶದ ಪರಿಸ್ಥಿತಿ ಸಾಮಾನ್ಯವಾಗಿದೆ. ನಾನು ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದೇನೆ. ಈಗ ಅಲ್ಲಿ ಎಲ್ಲವೂ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಸಾಕಷ್ಟು ಹತ್ಯಾಕಾಂಡಗಳು ಸಂಭವಿಸಿವೆ ಮತ್ತು ಅನೇಕ ವಿದ್ಯಾರ್ಥಿಗಳನ್ನು ಕೊಲ್ಲಲ್ಪಟ್ಟಿದ್ದಾರೆ. ಅಧಿಕೃತವಾಗಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಸುಮಾರು 1000 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಪರಿಸ್ಥಿತಿ ಅಷ್ಟೊಂದು ಚನ್ನಾಗಿಲ್ಲ, ತೀರಾ ಕೆಟ್ಟದ್ದಾಗಿಯೂ ಇಲ್ಲ: ಬಾಂಗ್ಲಾದೇಶದ ಸಿಲ್ಹೆಟ್‌ದಿಂದ ಬಂದ ಮತ್ತೊಬ್ಬ ಪ್ರಯಾಣಿಕ ತನ್ವೀರ್ ಮಾತನಾಡಿ, ಬಾಂಗ್ಲಾದೇಶದ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಮತ್ತು ಅಷ್ಟು ಕೆಟ್ಟದಾಗಿಯೂ ಇಲ್ಲ. ಮಧ್ಯಂತರ ಸರ್ಕಾರವು ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಮುಂದೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೆ, ಉತ್ತಮ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದರು.
ಭಯಾನಕತೆ ಬಿಚ್ಚಿಟ್ಟ ತನ್ವೀರ್: ಜುಲೈ 18 ರಂದು ನನ್ನ ಕಚೇರಿಯ ಬಳಿ ಯುದ್ಧಭೂಮಿಯಂತಿರುವುದನ್ನು ನಾನು ನೋಡಿದೆ. ಅದರ ನಂತರ ಕರ್ಫ್ಯೂ ಜಾರಿಯಾಗಿತ್ತು. ನನ್ನ ಕಣ್ಣುಗಳ ಮುಂದೆ ಸೈನ್ಯ ಮತ್ತು ಜನರು ಮಧ್ಯೆ ಘರ್ಷಣೆ ಸಂಭವಿಸಿತು. ಇದರಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ನನ್ನ ಮೇಲೆ ರಬ್ಬರ್ ಬುಲೆಟ್ ದಾಳಿಯಾಯಿತು. ಹೊರಗೆ ಬಂದಿದ್ದಕ್ಕೆ ನನ್ನನ್ನು ಪೊಲೀಸರು ಥಳಿಸಿದರು ಎಂದು ತನ್ವೀರ್ ಹೇಳಿದರು.
ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಢಾಕಾ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಜಾಯ್ನಾಲ್ ಅಬೆಡಿನ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಅಧ್ಯಕ್ಷ ಶಹಾಬುದ್ದೀನ್ ಮತ್ತು ವಿದ್ಯಾರ್ಥಿ ಆಂದೋಲನದ ಸಂಯೋಜಕರ ನಡುವಿನ ಸಭೆಯಲ್ಲಿ ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎಲ್ಲ ಭಾರತೀಯರೊಂದಿಗೂ ನಿಕಟ ಸಂಪರ್ಕ - ಜೈ ಶಂಕರ್: ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಾತನಾಡಿ,ನಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳ ಮೂಲಕ ನಾವು ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಅಂದಾಜು 19,000 ಭಾರತೀಯ ಪ್ರಜೆಗಳಿದ್ದಾರೆ. ಅದರಲ್ಲಿ ಸುಮಾರು 9000 ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಜುಲೈನಲ್ಲಿ ಹಿಂದಿರುಗಿದ್ದಾರೆ ಎಂದು ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು.
ಆಗಸ್ಟ್ 5 ರಂದು ಕರ್ಫ್ಯೂ ಹೊರತಾಗಿಯೂ ಢಾಕಾದಲ್ಲಿ ಪ್ರತಿಭಟನಾಕಾರರು ಸೇರಿದ್ದರು. ಭದ್ರತಾ ಸಂಸ್ಥೆಯ ನಾಯಕರೊಂದಿಗಿನ ಸಭೆಯ ನಂತರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡುವ ನಿರ್ಧಾರವನ್ನು ಸ್ಪಷ್ಟವಾಗಿ ತೆಗೆದುಕೊಂಡಿದ್ದರು. ಬಹಳ ಕಡಿಮೆ ಸಮಯದಲ್ಲಿ ಅವರು ಭಾರತಕ್ಕೆ ಬರಲು ಅನುಮೋದನೆಯನ್ನು ಕೋರಿದರು. ನಾವು ಏಕಕಾಲದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಫ್ಲೈಟ್ ಕ್ಲಿಯರೆನ್ಸ್‌ಗಾಗಿ ವಿನಂತಿಯನ್ನು ಸ್ವೀಕರಿಸಿದ್ದೆವು. ಅವರು ಸೋಮವಾರ ಸಂಜೆ ದೆಹಲಿಗೆ ಬಂದರು ಎಂದು ಜೈಶಂಕರ್ ಇದೇ ವೇಳೆ ಮಾಹಿತಿ ನೀಡಿದರು.