ಜೋಧ್ಪುರ (ರಾಜಸ್ಥಾನ): ಈ ಡಿಜಿಟಲ್ ಯುಗದಲ್ಲಿ ಅಶಿಕ್ಷಿತರಿಗಿಂತ ಶಿಕ್ಷಿತರೇ ಮೋಸದ ಜಾಲಕ್ಕೆ ಬೀಳುವುದು ಹೆಚ್ಚಾಗಿದೆ. ರಾಜಸ್ಥಾನದಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯೆಯೊಬ್ಬರು ಡೇಟಿಂಗ್ ಆ್ಯಪ್ನಲ್ಲಿ ಪರಿಚಿತನಾದ ವಿದೇಶಿ ನಕಲಿ 'ಸಖ'ನಿಂದ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ವೈದ್ಯೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಜಾಡನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ವೃತ್ತಾಂತ: ಏಮ್ಸ್ನ ವೈದ್ಯೆಗೆ ಡೇಟಿಂಗ್ ಆ್ಯಪ್ನಲ್ಲಿ ಆಕಾಶ್ ಜೋಶಿ ಎಂಬಾತ ಪರಿಚಯವಾಗಿದ್ದಾನೆ. ಆರೋಪಿಯು ತನ್ನ ಅಸಲಿಯತ್ತನ್ನು ಮುಚ್ಚಿಟ್ಟು ತಾನೂ ಕೂಡ ವೈದ್ಯ ಎಂದು ನಂಬಿಸಿದ್ದಾನೆ. ತಾನೊಬ್ಬ ಹೃದ್ರೋಗ ತಜ್ಞ, ತಾನು ಸದ್ಯ ನೆದರ್ಲಾಂಡ್ ನಿವಾಸಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದನ್ನು ನಂಬಿದ ಮಹಿಳಾ ವೈದ್ಯೆ ಆತನೊಂದಿಗೆ ಸಲುಗೆ ಬೆಳೆಸಿದ್ದರು.
ಇಬ್ಬರ ನಡುವಿನ ಸಂಪರ್ಕ ಮದುವೆ ಹಂತಕ್ಕೆ ತಲುಪಿತ್ತು. ಇಬ್ಬರೂ ಪರಸ್ಪರ ವಿವಾಹವಾಗಲು ಸಹ ಒಪ್ಪಿದ್ದರು. ಈ ನಡುವೆ ಆರೋಪಿ ಆಕಾಶ್ ಅಕ್ಟೋಬರ್ 22 ರಂದು, ತಾನ ಇಸ್ತಾಂಬುಲ್‌ಗೆ ಕೆಲವು ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಬಂದಿದ್ದೇನೆ. ಶಿಪ್ಪಿಂಗ್ ಶುಲ್ಕ ಮತ್ತು ಹೋಟೆಲ್ ಬಿಲ್ ಪಾವತಿಸಲು ತನಗೆ ಹಣದ ಅಗತ್ಯವಿದೆ ಎಂದು ವೈದ್ಯೆಯ ಬಳಿ ಕೇಳಿದ್ದ. ತನಗೆ ಹಣಕಾಸಿನ ನೆರವು ನೀಡುವಂತೆ ಕೋರಿ, ಇಬ್ಬರು ರಾಯ್ ಬರೇಲಿ ಮತ್ತು ಇಂದೋರ್‌ನಲ್ಲಿನ ಎರಡು ಖಾತೆಗಳ ವಿವರಗಳನ್ನು ಕಳುಹಿಸಿದ್ದ. ಮಹಿಳಾ ವೈದ್ಯೆ ಆ ಖಾತೆಗಳಿಗೆ 9,890 ಯುರೋ ಅಂದರೆ ಸುಮಾರು 9 ಲಕ್ಷ ರೂಪಾಯಿ ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮರುಪಾವತಿ ಹೆಸರಲ್ಲಿ ಮತ್ತೆ ವಂಚನೆ: ಆರೋಪಿಯು ಇಷ್ಟಕ್ಕೇ ಬಿಡದೆ ವೈದ್ಯೆಯನ್ನು ಮರುಪಾವತಿ ಹೆಸರಿನಲ್ಲಿ ಮತ್ತೆ ವಂಚನೆ ಮಾಡಿದ್ದಾನೆ. ಅಕ್ಟೋಬರ್ 28 ರಂದು ವಾಟ್ಸಪ್ ಕರೆ ಮಾಡಿದ ಆತ 30 ಸಾವಿರ ಯೂರೋಗಳನ್ನು ಎಸ್ಬಿಐ ಖಾತೆಗೆ ವರ್ಗಾಯಿಸಿದ್ದೇನೆ. ಅವುಗಳನ್ನು ಭಾರತದ ಕರೆನ್ಸಿಗೆ ಬದಲಿಸಿಕೊಳ್ಳಲು ತಿಳಿಸಿದ್ದಾನೆ. ಬಳಿಕ ವೈದ್ಯೆಗೆ ಆರ್‌ಬಿಐ ಹೆಸರಿನಲ್ಲಿ ಇ-ಮೇಲ್ ಬಂದಿದೆ. ಅದರಲ್ಲಿ 30 ಸಾವಿರ ಯೂರೋಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸುವ ಪ್ರಕ್ರಿಯೆಗೆ 9 ಲಕ್ಷ 35 ಸಾವಿರ ರೂಪಾಯಿ ನೀಡಬೇಕು ಎಂದು ಸೂಚಿಸಲಾಗಿದೆ.
ಇದನ್ನು ನಂಬಿದ ಮಹಿಳಾ ವೈದ್ಯೆ ಅಷ್ಟೂ ಹಣವನ್ನು ವಿವಿಧ ಬ್ಯಾಂಕ್ಗಳ ಖಾತೆಗೆ ವರ್ಗಾಯಿಸಿದ್ದಾರೆ. ಇದಾದ ನಂತರ 30 ಸಾವಿರ ಯುರೋ ಹಣ ತನ್ನ ಖಾತೆಗೆ ಬಂದಿಲ್ಲದ್ದನ್ನು ಗಮನಿಸಿದ್ದಾರೆ. ಈ ವೇಳೆ ಆಕಾಶ್ನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ನಾಪತ್ತೆಯಾಗಿದ್ದಾನೆ. ಬಳಿಕ ತಾವು ಮೋಸ ಹೋದ ಬಗ್ಗೆ ವೈದ್ಯೆಗೆ ಮನವರಿಕೆಯಾಗಿದೆ. ತಕ್ಷಣವೇ ಅವರು, ಭಗತ್ ಕೋಠಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಠಾಣೆಯ ಎಎಸ್‌ಐ ಮತ್ತು ತನಿಖಾಧಿಕಾರಿ ಪ್ರಹ್ಲಾದ್ ಮೀನಾ ಅವರ ಪ್ರಕಾರ, ಆರೋಪಿ ಮತ್ತು ಮೋಸ ಹೋದ ವೈದ್ಯೆ ಮಧ್ಯೆ ಅಕ್ಟೋಬರ್ನಿಂದ ಸಂಪರ್ಕ ಬೆಳೆದಿತ್ತು. ಬಳಿಕ ಆತ ಎರಡು ಬಾರಿ 9 ಲಕ್ಷದಂತೆ ಹಣವನ್ನು ಪೀಕಿದ್ದಾನೆ. ವೈದ್ಯೆಯನ್ನು ಮದುವೆಯಾಗುವುದಾಗಿಯೂ ವಂಚಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಪನ್ನು ಬೆದರಿಕೆ; ಅಯೋಧ್ಯೆಗೆ ಬಿಗಿ ಭದ್ರತೆ ಹೆಚ್ಚಳ