ಗುವಾಹಟಿ(ಅಸ್ಸಾಂ): ಲೋಕೋ ಪೈಲಟ್‌ಗಳು ಕೃತಕ ಬುದ್ಧಿಮತ್ತೆ (ಎಐ) ಆಧರಿತ ವ್ಯವಸ್ಥೆಯ ಸಹಾಯದಿಂದ ಕಾಡಾನೆಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ್ದಾರೆ. ಈಶಾನ್ಯ ಗಡಿ ರೈಲ್ವೇಯ (ಎನ್‌ಎಫ್‌ಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಪಿಂಜಲ್ ಶರ್ಮಾ ಗುರುವಾರ ಈ ವಿಷಯ ತಿಳಿಸಿದ್ದು, ಮರಿಗಳೂ ಸೇರಿದಂತೆ ಕನಿಷ್ಠ 60 ಆನೆಗಳು ಹಿಂಡಿನಲ್ಲಿದ್ದವು ಎಂದು ತಿಳಿಸಿದ್ದಾರೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಲುಮ್‌ಡಿಂಗ್‌ಗೆ ತೆರಳುತ್ತಿದ್ದ ಕಾಮ್ರೂಪ್ ಎಕ್ಸ್‌ಪ್ರೆಸ್ ರೈಲು ಲಮ್ಸಾಖಾಂಗ್ ನಿಲ್ದಾಣಕ್ಕೆ ತಲುಪುತ್ತಿದ್ದಾಗ ಈ ಘಟನೆ ನಡೆದಿದೆ. "ಆನೆಗಳ ಹಿಂಡು ಹಬೈಪುರ್ ಮತ್ತು ಲಮ್ಸಾಖಾಂಗ್ ನಿಲ್ದಾಣದ ನಡುವೆ ರೈಲು ಹಳಿಗಳನ್ನು ದಾಟುತ್ತಿದ್ದವು. ಇದನ್ನು ಗಮನಿಸಿದ ಲೋಕೋ ಮತ್ತು ಸಹಾಯಕ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದರು" ಎಂದು ಶರ್ಮಾ ಮಾಹಿತಿ ನೀಡಿದರು.
ಐಡಿಎಸ್ ಮೂಲಕ ಪೈಲಟ್‌ಗಳಿಗೆ ಎಚ್ಚರಿಕೆ: ಆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಇಂಟ್ರುಷನ್ ಡಿಟೆಕ್ಟಿವ್ ಸಿಸ್ಟಮ್) ಮೂಲಕ ರೈಲಿನ ಲೋಕೋ ಪೈಲಟ್‌ಗಳಿಗೆ ಎಚ್ಚರಿಕೆ ನೀಡಲಾಯಿತು ಎಂದರು.
ಎನ್‌ಎಫ್‌ಆರ್‌ನಲ್ಲಿ ಹರಡಿರುವ ಇತರೆ ಎಲ್ಲ ಆನೆ ಕಾರಿಡಾರ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆಯನ್ನು (ಐಡಿಎಸ್) ವಿಸ್ತರಿಸಲು ಈಶಾನ್ಯ ರೈಲ್ವೇ ಯೋಜಿಸಿದೆ ಎಂದು ಅವರು ಹೇಳಿದ್ದಾರೆ.
2023ರಲ್ಲಿ ಎನ್‌ಎಫ್‌ಆರ್ ಒಟ್ಟು 414 ಆನೆಗಳನ್ನು ರಕ್ಷಿಸಿದೆ. ಜನವರಿಯಿಂದ ಅಕ್ಟೋಬರ್ 16 ರವರೆಗೆ ಒಟ್ಟು 383 ಆನೆಗಳನ್ನು ಹಳಿಗಳ ಮೇಲಿನ ಘರ್ಷಣೆಯಿಂದ ರಕ್ಷಿಸಲಾಗಿದೆ.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್- ವಿಡಿಯೋ - elephant rescue