ಆಗ್ರಾ: ಎಂಟು ವರ್ಷದ ಬಾಲಕಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ನಮ್ಮ ಮಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಗೋಣಿ ಚೀಲದಲ್ಲಿ ಹಾಕಿ ಬಿಸಾಕಿರುವುದಾಗಿ ಪೋಷಕರು ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಮಲ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತೀವ್ರ ಸಂಚಲನ ಮೂಡಿಸಿದೆ.
ಗುರುವಾರ ಪೋಷಕರೊಂದಿಗೆ ದೀಪಾವಳಿ ಆಚರಿಸಿದ್ದ ಬಾಲಕಿಯು ಸಂಜೆ ಮನೆಯಿಂದ ನಾಪತ್ತೆಯಾಗಿದ್ದಳು. ರಾತ್ರಿಯಿಡೀ ಹುಡುಕಾಟ ನಡೆಸಿದ್ದ ಪೋಷಕರು, ಕೊನೆಗೆ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಕಾಲುವೆ ದಡದಲ್ಲಿ ಗೋಣಿಚೀಲದಲ್ಲಿ ಬಾಲಕಿ ಶವವಾಗಿ ಪತ್ತೆಯಾದಾಗಿದ್ದಾಳೆ.
ಮಲ್ಪುರ್ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಬಾಲಕಿಯನ್ನು ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಶವವನ್ನು ಗೋಣಿಚೀಲದಲ್ಲಿ ತುಂಬಿ ಕಾಲುವೆಗೆ ಎಸೆದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ನಮಗೆ ನ್ಯಾಯ ಬೇಕು. ಬಾಲಕಿಯನ್ನು ಕೊಲೆ ಮಾಡಿದ ಆರೋಪಿಗಳ ಬಂಧನ ಆಗಬೇಕು. ಅಲ್ಲಿವರೆಗೂ ನಾವು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇದರಿಂದ ಕೆಲಕಾಲ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದರು. ಬಳಿಕ ನ್ಯಾಯ ಕೊಡಿಸುವ ಭರವಸೆ ನೀಡಿ, ಮನವೊಲಿಸುವ ಪ್ರಯತ್ನ ನಡೆಸಿದರು.
ಬಾಲಕಿಯ ಬಾಯಿಯಲ್ಲಿ ಬಟ್ಟೆ ತುರುಕಿ ಗೋಣಿ ಚೀಲದಲ್ಲಿ ತುಂಬಲಾಗಿದೆ. ಹಣೆಯಲ್ಲಿ ತಿಲಕ, ಕೊರಳಲ್ಲಿ ಮಾಲೆ ಹಾಕಲಾಗಿತ್ತು. ಕೊಲೆ ಬಳಿಕ ಬಾಲಕಿಯ ಶವವನ್ನು ಗೋಣಿ ಚೀಲದಲ್ಲಿ ಗ್ರಾಮದಿಂದ ದೂರದಲ್ಲಿರುವ ಕಾಲುವೆಯ ಬಳಿ ಎಸೆದಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ ಸೋನಮ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಟಾಕಿ ಸದ್ದಿನ ನಡುವೆ ಚಿಕ್ಕಪ್ಪ, ಸೋದರಳಿಯನ ಹತ್ಯೆ: ಪಾದಗಳನ್ನು ಸ್ಪರ್ಶಿಸಿ ನಂತರ 5 ಗುಂಡು ಹಾರಿಸಿದ ದುಷ್ಕರ್ಮಿ