ಚಂಡೀಗಢ: ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಕಾಂಗ್ರೆಸ್ನಿಂದ ಅಮಾನತಾಗಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರು ಗುರುವಾರ ಅಥವಾ ಶುಕ್ರವಾರ ಬಿಜೆಪಿ ಸೇರುವ ಸಾಧ್ಯತೆ ಇದೆ.
ಈಚೆಗೆ ಅವರು ಕಮಲ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಕೌರ್ ಅವರು ಬಿಜೆಪಿ ಸೇರುವ ವದಂತಿ ಜೋರಾಗಿತ್ತು. ಅದಕ್ಕೆ ಇನ್ನೆರಡು ದಿನಗಳಲ್ಲಿ ಅಂತಿಮ ಮುದ್ರೆ ಬೀಳುವ ಲಕ್ಷಣಗಳಿವೆ.
ಪಟಿಯಾಲದಿಂದ ಲೋಕ ಕಣಕ್ಕೆ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕ್ಯಾಪ್ಟನ್ ಕುಟುಂಬದಿಂದ ಬಂದಿರುವ ಈ ಹೊಸ ಸುದ್ದಿ ರಾಜಕೀಯ ಕಾರಿಡಾರ್ನಲ್ಲಿ ಸಂಚಲನ ಮೂಡಿಸಿದೆ. ಪಟಿಯಾಲದ ಕಾಂಗ್ರೆಸ್ ಸಂಸದೆಯಾಗಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಬಿಜೆಪಿ ಟಿಕೆಟ್ನಿಂದ ಪಟಿಯಾಲ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರಿ, ಲೋಕಸಭೆ ಚುನಾವಣಾ ಕಣಕ್ಕೂ ಧುಮುಕುವ ಘೋಷಣೆ ಕೂಡ ಹೊರಬೀಳುವ ನಿರೀಕ್ಷೆಗಳಿವೆ. ಈಗಾಗಲೇ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಅವರ ಪುತ್ರಿ ಜೈ ಇಂದರ್ ಕೌರ್ ಮತ್ತು ಮೊಮ್ಮಗ ನಿರ್ವಾನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ನಿಂದ ಅಮಾನತು: ಕಾಂಗ್ರೆಸ್ ಸಂಸದೆಯಾಗಿರುವ ಪ್ರಣೀತ್ ಕೌರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮತ್ತು ಬಿಜೆಪಿಗೆ ನೆರವು ನೀಡಿದ ಆರೋಪ ಮೇರೆಗೆ ಫೆಬ್ರವರಿಯಲ್ಲಿ ಪಕ್ಷದಿಂದಲೇ ಅಮಾನತು ಮಾಡಲಾಗಿತ್ತು. ಕಳೆದ ವರ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪುತ್ರ ರಣೀಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್ ಮತ್ತು ಮೊಮ್ಮಗ ನಿರ್ವಾನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಕೌರ್ ಅವರು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಪ್ರಣೀತ್ ಕೌರ್ ಬಿಜೆಪಿಗೆ ಸಹಾಯ ಮಾಡಲು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಪಿಸಿಸಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ದೂರು ನೀಡಿದ್ದರು. ಜೊತೆಗೆ ಪಂಜಾಬ್‌ನ ಇತರೆ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಈ ಆರೋಪ ಮಾಡಿದ್ದರು. ಈ ದೂರಿನ ಅನುಸಾರ ಎಐಸಿಸಿ ಶಿಸ್ತು ಕ್ರಮ ಸಮಿತಿ ಕೌರ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಿತ್ತು.
ಪ್ರಣೀತ್ ಕೌರ್ 1999, 2004, 2009ರ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು. ಅಲ್ಲದೇ, 2009ರಿಂದ 2012ರವರೆಗೆ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು, 2019ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಗೆದ್ದಿದ್ದರು.
ಇದನ್ನೂ ಓದಿ: 'ಪಕ್ಷ ವಿರೋಧಿ ಚಟುವಟಿಕೆ': ಕ್ಯಾ.ಅಮರಿಂದರ್ ಸಿಂಗ್ ಪತ್ನಿಯನ್ನು ಅಮಾನತುಗೊಳಿಸಿದ ಕಾಂಗ್ರೆಸ್