ಮುಂಬೈ : ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್‌ನಲ್ಲಿ ಪ್ರೇಕ್ಷಕರ ಮನಗೆದ್ದಿರುವ ನಟ ಗೋವಿಂದ ಅವರು ಶಿವಸೇನೆ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಗೋವಿಂದ ಅವರು ಶಿವಸೇನೆ ಶಿಂದೆ ಬಣದ ಪಕ್ಷಕ್ಕೆ ಸೇರ್ಪಡೆಯಾದರು. ಮುಂಬೈ ವಾಯವ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಗೋವಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಏಕನಾಥ್ ಶಿಂಧೆ ಅವರನ್ನು ಗೋವಿಂದ ಭೇಟಿ ಮಾಡಿದ್ದರು.
ಗೋವಿಂದ ರಾಜಕೀಯ ಜೀವನ: 2004ರಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋವಿಂದ ಅವರು, ಬಿಜೆಪಿ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಭಾರಿ ಅಂತರದಿಂದ ಸೋಲಿಸಿ ಸಂಸದರಾಗಿದ್ದರು. ಅಂದು ಗೋವಿಂದ ಯಶಸ್ಸಿನ ಉತ್ತುಂಗದಲ್ಲಿದ್ದರು. ಯುವಜನತೆ ಹಾಗೂ ಸಿನಿಮಾ ಅಭಿಮಾನಿಗಳ ದೊಡ್ಡ ಬೆಂಬಲ ಅವರಿಗಿತ್ತು. ಇದರ ಲಾಭವನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶ್ವಸಿಯಾಗಿತ್ತು. ತದನಂತರ ಸಿನಿಮಾ ವೃತ್ತಿ ಕಡೆ ಗಮನ ಹರಿಸಬೇಕಾಗಿದೆ ಎಂದು ರಾಜಕೀಯದಿಂದ ದೂರವಿದ್ದರು. 2009ರ ವರೆಗೆ ತಮ್ಮ ಸಂಸತ್ ಅವಧಿ ಮುಗಿದ ಬಳಿಕ ಸಂಪೂರ್ಣವಾಗಿ ರಾಜಕೀಯ ಜೀವನ ಬೇಡ ಎಂದು ದೂರ ಸರಿದಿದ್ದರು.
ನಟ ಗೋವಿಂದ ಅವರು ತಮ್ಮನ್ನು ಭೇಟಿಯಾಗಿ ಸಕಾರಾತ್ಮಕವಾಗಿ ಮುಂಬೈ ಬದಲಾಗುತ್ತಿರುವ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯದಲ್ಲೂ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗಿವೆ. ಹೀಗಾಗಿ ಇದನ್ನು ಮನಗಂಡು ಗೋವಿಂದ ಅವರು ನಮ್ಮೊಂದಿಗೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಪಕ್ಷಕ್ಕೆ ಸೇರುವಾಗ ಅವರು ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಸ್ಟಾರ್ ಪ್ರಚಾರಕರಾಗಿ ಗೋವಿಂದ ಕಾರ್ಯನಿರ್ವಹಿಸಲಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ.
ಇದನ್ನೂ ಓದಿ : ಅಮರಾವತಿಯ ಪಕ್ಷೇತರ ಸಂಸದೆ ನಟಿ ನವನೀತ್ ಕೌರ್ ರಾಣಾ ಬಿಜೆಪಿಗೆ ಸೇರ್ಪಡೆ - Lok Sabha Election 2024