ಮೀರತ್ (ಉತ್ತರ ಪ್ರದೇಶ): ಯಾವುದೇ ಬೆಲೆ ತೆತ್ತರೂ ಸರಿಯೇ ಭ್ರಷ್ಟರ ವಿರುದ್ಧದ ನಮ್ಮ ಕ್ರಮ ನಿಲ್ಲುವುದಿಲ್ಲ. ಈ ಚುನಾವಣೆ ಕೇವಲ ಚುನಾವಣೆಯಲ್ಲ, ಭ್ರಷ್ಟರ ವಿರುದ್ಧದ ಸಮರ. ಭ್ರಷ್ಟಾಚಾರ ಕೊನೆಗೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಇಂದು ಚೌಧರಿ ಚರಣ್ ಸಿಂಗ್ ಗೌರವ್ ಸಮರೋಹ್ ಎಂಬ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ದೆಹಲಿಯಲ್ಲಿ ಒಟ್ಟಿಗೆ ಸೇರಿದವರು ನಾನು ಭಯಪಡುತ್ತೇನೆ ಎಂದು ಭಾವಿಸುತ್ತಾರೆ. ಆದರೆ, ನನ್ನ ದೇಶವೇ ನನ್ನ ಕುಟುಂಬ ಕುಟುಂಬವಾಗಿದ್ದು, ಯಾವುದೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯು ಕುಟುಂಬ ಮೊದಲೋ ವರ್ಸಸ್ ದೇಶ ಮೊದಲೋ ಎಂಬುದಾಗಿದೆ. ಜನರು 'ಕನ್ವರ್ ಯಾತ್ರೆ' ಅಥವಾ ಕರ್ಫ್ಯೂ ಬೇಕೆ? ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.
ಭ್ರಷ್ಟರ ಮುಂದೆ ಮೋದಿ ತಲೆಬಾಗುವುದಿಲ್ಲ. ಕೆಲವು ದೊಡ್ಡ ಭ್ರಷ್ಟರು ಭ್ರಷ್ಟಾಚಾರ ನಡೆಸುವುದಕ್ಕಾಗಿ ಕಂಬಿ ಹಿಂದೆ ಬಿದ್ದಿದ್ದಾರೆ. ನೀವು ಇಲ್ಲಿಯವರೆಗೆ ಅಭಿವೃದ್ಧಿಯ ಟ್ರೇಲರ್ಅನ್ನು ಮಾತ್ರ ನೋಡಿದ್ದೀರಿ. ನಾವು ದೇಶವನ್ನು ಹೆಚ್ಚು ಮುಂದಕ್ಕೆ ಕೊಂಡೊಯ್ಯಬೇಕು. ಭಾರತದ ವಿಶ್ವಾಸಾರ್ಹತೆ ಹೊಸ ಉತ್ತುಂಗದಲ್ಲಿದೆ. ಇಡೀ ಜಗತ್ತು ಭಾರತದತ್ತ ವಿಶ್ವಾಸದಿಂದ ನೋಡುತ್ತಿದೆ. ಇದೇ ಸರಿಯಾದ ಸಮಯ ಎಂದು ನಾನು ಕೆಂಪುಕೋಟೆಯ ಮೇಲೆ ಹೇಳಿದ್ದೆ. ಭಾರತದ ಸಮಯ ಬಂದಿದೆ. ಇಂದು ಭಾರತದಲ್ಲಿ ಆಧುನಿಕ ಮೂಲಸೌಕರ್ಯಗಳು ವೇಗವಾಗಿ ನಿರ್ಮಾಣವಾಗುತ್ತಿವೆ. ಭಾರತವು ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇಂದು ದೇಶದ ಮಹಿಳಾ ಶಕ್ತಿ ಹೊಸ ಸಂಕಲ್ಪಗಳೊಂದಿಗೆ ಮುಂದೆ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಅಸಾಧ್ಯವೆನಿಸಿದ ಹಲವು ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ ಎಂದು ಪ್ರಧಾನಿ ವಿವರಿಸಿದರು.
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವು ಅಸಾಧ್ಯವೆಂದು ಹೇಳಲಾಗುತ್ತಿತ್ತು. ಆದರೆ, ಅದು ಈಗ ನಿಜವಾಗಿದೆ. ಪ್ರತಿದಿನ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಬಾರಿ ಅದ್ಧೂರಿ ಹೋಳಿ ಆಚರಣೆ ನಡೆದಿದ್ದು, ರಾಮ್ ಲಲ್ಲಾ ಕೂಡ ಹೋಳಿ ಆಡಿದ್ದಾರೆ. ನಾನು ಮೀರತ್‌ನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದೇನೆ. 2014 ಮತ್ತು 2019ರ ಚುನಾವಣೆಗಳಿಗೆ ಮೀರತ್‌ನಿಂದಲೇ ನಾನು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದೆ. ಈಗ 2024ರ ಚುನಾವಣೆಯ ಮೊದಲ ಮೀರತ್‌ನಲ್ಲಿ ಸಭೆ ಆಯೋಜಿಸಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯು ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆಯಲ್ಲ, ಬದಲಿಗೆ 'ವಿಕಸಿತ ಭಾರತ' ಮಾಡುವ ಚುನಾವಣೆಯಾಗಿದೆ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಸೇರಿ ಹಲವರು ಉಪಸ್ಥಿತರಿದ್ದರು.