ಧನ್ಬಾದ್(ಜಾರ್ಖಂಡ್): ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಾರ್ಖಂಡ್ನಲ್ಲಿ ಲೋಕಸಭಾ ಚುನಾವಣೆಯ ಕಹಳೆ ಮೊಳಗಿಸಿದರು. "ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 400 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮೋದಿ ಗ್ಯಾರಂಟಿ ಮೇಲೆ ದೇಶ ವಿಶ್ವಾಸ ಹೊಂದಿದೆ" ಎಂದರು.
ಧನ್ಬಾದ್ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶ ಉದ್ದೇಶಿಸಿದ ಮಾತನಾಡಿದ ಅವರು, ''ಮೋದಿ ಗ್ಯಾರಂಟಿ ಮೇಲೆ ದೇಶ ವಿಶ್ವಾಸ ಹೊಂದಿರುವ ಕಾರಣ ಎಲ್ಲೆಡೆಯೂ '400 ಮೀರಲಿದೆ' ಎಂಬ ಘೋಷಣೆ ಕೇಳಿ ಬರುತ್ತಿದೆ. ಯಾವಾಗ ಇತರರ ಎಲ್ಲ ಭರವಸೆಗಳು ಕೊನೆಗಾಣುತ್ತವೆಯೋ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತದೆ'' ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ''ಅವರೆಲ್ಲರೂ ದೇಶದಲ್ಲಿ ಸಕಾರಾತ್ಮಕ ಅಭಿವೃದ್ಧಿಯ ವಿರೋಧಿಗಳು, ಜನ ವಿರೋಧಿಗಳು'' ಎಂದು ಟೀಕಿಸಿದರು.
''ಉತ್ತರ ಕರಣ್ಪುರ್ನಲ್ಲಿ ವಿದ್ಯುತ್ ಸ್ಥಾವರ ಘಟಕಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ಮಾಡಿದ್ದರು. ಇವರ ನಂತರ ಅಧಿಕಾರಕ್ಕೆ ಕಾಂಗ್ರೆಸ್ನ ಹಗರಣಗಳ ಸರ್ಕಾರ ಈ ಯೋಜನೆಯನ್ನೇ ಮುಚ್ಚಿಹಾಕಿತ್ತು. 2014ರಲ್ಲಿ ನಾನು ಈ ಯೋಜನೆಯ ಪುನರುಜ್ಜೀವನದ ಬಗ್ಗೆ ಗ್ಯಾರಂಟಿ ನೀಡಿದ್ದೆ. ಇಂದು ಈ ಘಟಕದ ಕಾರಣದಿಂದ ಅನೇಕ ಸಂಖ್ಯೆಯ ಮನೆಗಳು ಬೆಳಕು ಕಾಣುತ್ತಿವೆ'' ಎಂದು ಹೇಳಿದರು.
ಇದೇ ವೇಳೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಜನರ ಕ್ಷಮೆಯನ್ನೂ ಕೋರಿದ ಪ್ರಸಂಗ ನಡೆಯಿತು. ''ಶೇ.5ರಷ್ಟು ಮಾತ್ರ ಜನರು ಮಾತ್ರವೇ ಪೆಂಡಲ್ ಒಳಗಡೆ ಇದ್ದೀರಿ. ಉಳಿದ ಶೇ.95ರಷ್ಟು ಜನರು ಹೊರೆಗಡೆ ಸೂರ್ಯನ ಬಿಸಿಲಿನಲ್ಲಿ ನಿಂತಿದ್ದಾರೆ. ಸಭೆಯ ಪೆಂಡಲ್ ಚಿಕ್ಕದಾಗಿರುವುದಕ್ಕೆ ನಾನು ಕ್ಷಮೆ ಕೋರುವೆ'' ಎಂದರು.
ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷ ಬಾಬುಲಾಲ್ ಮರಾಂಡಿ ಮಾತನಾಡಿ, ''ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸರ್ಕಾರವು ರಾಜ್ಯದಲ್ಲಿ ಭೂಮಿಯನ್ನು ಕೊಳ್ಳೆ ಹೊಡೆಯುವಲ್ಲಿ ನಿರತವಾಗಿವೆ. ರಾಜ, ಮಹಾರಾಜರು ಕೂಡ ಹೊಂದಿರದಷ್ಟು ಭೂಮಿಯನ್ನು ಮಾಜಿ ಸಿಎಂ ಹೇಮಂತ್ ಸೊರೇನ್ ಕುಟುಂಬ ಹೊಂದಿದೆ. ಎಲ್ಲವನ್ನೂ ಬಡ ಜನರಿಂದಲೇ ಲೂಟಿ ಮಾಡಿದ್ದಾರೆ'' ಎಂದು ಆರೋಪಿಸಿದರು.
ರಸಗೊಬ್ಬರ ಕಾರ್ಖಾನೆ ಉದ್ಘಾಟನೆ: ಇದಕ್ಕೂ ಮುನ್ನ ಸಿಂದ್ರಿ ರಸಗೊಬ್ಬರ ಕಾರ್ಖಾನೆ ಉದ್ಘಾಟಿಸಿದ ಪ್ರಧಾನಿ ಮೋದಿ, ರೈಲ್ವೆ, ಕಲ್ಲಿದ್ದಲು, ವಿದ್ಯುತ್ ವಲಯಕ್ಕೆ ಸೇರಿದ ಅಂದಾಜು 35,000 ಕೋಟಿ ರೂ.ಗಳ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಮುಖ್ಯಮಂತ್ರಿ ಚಂಪೈ ಸೊರೇನ್, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಿಜೆಪಿ ಚುನಾವಣಾ ಸಮಿತಿ ಸಭೆ: ಲೋಕಸಭೆ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರದಲ್ಲೇ ಬಿಡುಗಡೆ