ನವದೆಹಲಿ: ''ಎಎಪಿ ನಾಯಕರ ವಿರುದ್ಧ ಬಿಜೆಪಿಯು 'ಆಪರೇಷನ್ ಝಾಡು' ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಚುನಾವಣೆಯ ನಂತರ ಎಎಪಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದರು. ಪ್ರಧಾನಿಯವರಿಗೆ ಆಮ್ ಆದ್ಮಿ ಪಕ್ಷವನ್ನು ನಾಶ ಮಾಡುವ ಉದ್ದೇಶವಿದೆ'' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ''ನಾವು ಇಂದು ಇಲ್ಲಿ ಏಕೆ ಸೇರಿದ್ದೇವೆ ಎಂಬುದನ್ನು ನಿಮಗೆ ಹೇಳುತ್ತೇನೆ. ಆಮ್ ಆದ್ಮಿ ಪಕ್ಷವನ್ನು ಹತ್ತಿಕ್ಕಲು ಪ್ರಧಾನಿ ಪ್ಲಾನ್ ಮಾಡಿದ್ದಾರೆ. ಅವರು 'ಆಪರೇಷನ್ ಝಾಡು' ರಚಿಸಿದ್ದಾರೆ'' ಎಂದು ಆರೋಪಿಸಿದರು.
ದೆಹಲಿ ಪೊಲೀಸ್ ಎಚ್ಚರಿಕೆ: ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಬಿಜೆಪಿ ವಿರುದ್ಧದ ಪ್ರತಿಭಟನಾ ಮೆರವಣಿಗೆಯ ನಡುವೆಯೇ, ದೆಹಲಿ ಪೊಲೀಸರು ನಿರಂತರವಾಗಿ ಬಿಜೆಪಿ ಕಚೇರಿ ಇರುವ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಈ ಸ್ಥಳವನ್ನು ಆದಷ್ಟು ಬೇಗ ಖಾಲಿ ಮಾಡಬೇಕು. ಇಲ್ಲಿ ಸೇರುವುದು ಕಾನೂನು ಬಾಹಿರ. ಇದು ನಿರ್ಬಂಧಿತ ಪ್ರದೇಶವಾಗಿದ್ದರಿಂದ ತೆರವು ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜೈಲಿನ ಆಟವಾಡುವುದನ್ನು ನಿಲ್ಲಿಸಿ- ಸಿಎಂ ಕೇಜ್ರಿವಾಲ್ ಕಿಡಿ: ಬಿಜೆಪಿ ಕಚೇರಿ ತಲುಪುವ ಮುನ್ನ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ''ಪ್ರಧಾನಿಯವರೇ, ಪ್ರತಿದಿನ ಜೈಲಿನ ಆಟವಾಡುವುದನ್ನು ನಿಲ್ಲಿಸಿ. ನಾವು ನಿಮ್ಮ ಕಚೇರಿಯನ್ನು ತಲುಪುತ್ತೇವೆ. ಇಡೀ ಆಮ್ ಆದ್ಮಿ ಪಕ್ಷವನ್ನು ಒಟ್ಟಾಗಿ ಬಂಧಿಸಿ'' ಎಂದು ಸವಾಲು ಹಾಕಿದರು.
ಬಿಜೆಪಿಗೆ ಎಎಪಿ ದೊಡ್ಡ ಸವಾಲು- ಕೇಜ್ರಿವಾಲ್: ''ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಹಲವು ರಾಜ್ಯಗಳಲ್ಲಿ ಬಿಜೆಪಿಗೆ ಸವಾಲಾಗಬಹುದು, ಆದ್ದರಿಂದ ಪ್ರಧಾನಿಯವರು ಈ ಪಕ್ಷವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಅಂದುಕೊಂಡಿದ್ದಾರೆ'' ಎಂದು ಹೇಳಿದ ಅರವಿಂದ್ ಕೇಜ್ರಿವಾಲ್, ''ಆಪರೇಷನ್ ಝಾಡು ಅಡಿಯಲ್ಲಿ, ಆಮ್ ಆದ್ಮಿ ಪಕ್ಷದ ದೊಡ್ಡ ನಾಯಕರನ್ನು ಬಂಧನ ಮಾಡಲಾಗುತ್ತಿದೆ. ಚುನಾವಣೆಯ ನಂತರ ಆಮ್ ಆದ್ಮಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಇಡಿ ಹೇಳಿದೆ. ಈ ಮೂಲಕ ಆಮ್ ಆದ್ಮಿ ಪಕ್ಷವನ್ನು ನಾಶ ಮಾಡುತ್ತೇನೆಂದು ಅವರು ಭಾವಿಸಿದ್ದಾರೆ. ಇದು 140 ಕೋಟಿ ಜನರ ಕನಸಿನ ಪಕ್ಷ. 75 ವರ್ಷಗಳಲ್ಲಿ ಆಗದೇ ಇರುವಂತಹ ಕೆಲಸಗಳನ್ನು ನಮ್ಮ ಪಕ್ಷದ ಆಡಳಿತದಲ್ಲಿ ನಡೆದಿದೆ. ಅಂತಹ ಪ್ರಾಮಾಣಿಕತೆಯಿಂದ ಸರಕಾರವು ಆಡಳಿತ ನಡೆಸಿದೆ. ನಮ್ಮ ಪಕ್ಷದ ಸಿದ್ಧಾಂತ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಇದರ ಹೊರತಾಗಿ ನಾವು ಬಂಧನಕ್ಕೆ ಹೆದರುವುದಿಲ್ಲ'' ಎಂದು ಹೇಳಿದರು.
ಪ್ರತಿಭಟನೆ ಹಿನ್ನೆಲೆ ಏನು?: ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ದೆಹಲಿ ಸಿಎಂ ಮಾಜಿ ಖಾಸಗಿ ಕಾರ್ಯದರ್ಶಿ ವಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ವಿರೋಧಿಸಿ ಭಾನುವಾರ ಆಮ್ ಆದ್ಮಿ ಪಕ್ಷ ಕಾರ್ಯಕರ್ತರು, ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಎಎಪಿ ನಾಯಕರ ಬಂಧನದ ವಿರುದ್ಧ ಬಿಜೆಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.