ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಮೈತ್ರಿ ಏರ್ಪಟ್ಟಿದೆ. ಸೀಟು ಹಂಚಿಕೆ ವಿಚಾರವಾಗಿ ನಡೆದ ದೀರ್ಘ ಮಾತುಕತೆ ಅಂತ್ಯವಾಗಿದ್ದು, ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ರಾಜಕೀಯ ಪಕ್ಷಗಳ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮತ್ತು ಆಪ್ ನಡುವಿನ ಸೀಟು ಹಂಚಿಕೆಯು ಮುಗಿದಿದೆ. ಆಪ್ ಐದು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದೆ. ಸೋಮವಾರ ಈ ಮೈತ್ರಿ ಅಧಿಕೃತವಾಗಲಿದೆ ಎಂದು ತಿಳಿದುಬಂದಿದೆ.
ಸೀಟು ಹಂಚಿಕೆ ವಿಚಾರವಾಗಿ ಆಪ್ ಪಟ್ಟು ಸಡಿಲಿಸದ ಕಾರಣ, ಎರಡೂ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿತ್ತು. ವಿಧಾನಸಭೆಯ 90 ಸ್ಥಾನಗಳ ಪೈಕಿ ಆಪ್ 7ರಿಂದ 10 ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಇದಕ್ಕೆ ಒಪ್ಪದ ಕಾರಣ, ಮೈತ್ರಿ ಸಂಭವಿಸುವ ಬಗ್ಗೆ ಅನುಮಾನ ಮೂಡಿತ್ತು.
ಕಾಂಗ್ರೆಸ್‌ನ ದೀಪಕ್ ಬಬಾರಿಯಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ನಡುವೆ ಭಾನುವಾರ ನಡೆದ ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ. ಸೋಮವಾರ ಮೈತ್ರಿಯಾದ ಬಗ್ಗೆ ಅಂತಿಮ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಆಪ್ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಮಾತನಾಡಿದ್ದ ಆಪ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ಕಾಂಗ್ರೆಸ್ ಮತ್ತು ನಮ್ಮ ಪಕ್ಷ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಹರಿಯಾಣ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಮೈತ್ರಿ ಬಗ್ಗೆ ಒಮ್ಮತ ಮೂಡದಿದ್ದರೂ, ಮಾತುಕತೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿವೆ. ಉತ್ತಮ ಫಲಿತಾಂಶ ಬರಲಿದೆ ಎಂದಿದ್ದರು.
ಹರಿಯಾಣದ 90 ಸದಸ್ಯ ಬಲದ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಮೈತ್ರಿ ಅಂತಿಮವಾಗಿಲ್ಲ: ಆಮ್ ಆದ್ಮಿ ಪಕ್ಷದ ಇನ್ನೊಂದು ಮಾಹಿತಿಯ ಪ್ರಕಾರ, ಕಾಂಗ್ರೆಸ್ ಜೊತೆಗಿನ ಮೈತ್ರಿ ಯಾವುದೇ ಅಂತಿಮವಾಗಿಲ್ಲ. ಈ ಬಗ್ಗೆ ಮತ್ತಷ್ಟು ಮಾತುಕತೆಗಳು ನಡೆಯಬೇಕಿದೆ ಎಂದು ತಿಳಿದುಬಂದಿದೆ. ಮಾತುಕತೆಗಳು ಜಾರಿಯಲ್ಲಿವೆ. 5 ಸ್ಥಾನಗಳಲ್ಲಿ ಆಪ್ ಸ್ಪರ್ಧಿಸಲು ಒಪ್ಪಿಕೊಂಡಿದೆ ಎಂದು ಅಧಿಕೃತಪಡಿಸಿಲ್ಲ ಎಂದು ತಿಳಿಸಿದೆ.