ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ರೀಲ್ಸ್ಗಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಎಲ್ಲಿ ಬೇಕೆಂದರಲ್ಲಿ ವಿಡಿಯೋಗಳನ್ನು ಮಾಡುವುದು ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದು ಸಹ ಅಪಾಯಕಾರಿ. ಅಷ್ಟೇ ಅಲ್ಲ ಕೆಲವರು ಇದರಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಯುವತಿಯೊಬ್ಬಳು ಕಾರಿನಲ್ಲಿ ಕುಳಿತು ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
30 ಸೆಕೆಂಡ್ ರೀಲ್ಸ್ ಮಾಡಲು ಹೋದ 23 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ದೌಲತಾಬಾದ್ ಪ್ರದೇಶದ ಸುಲಿಭಂಜನ್‌ನಲ್ಲಿರುವ ದತ್ತ ದೇವಸ್ಥಾನದ ಬಳಿ ಸೋಮವಾರ (ಜೂನ್ 17) ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯ ನಂತರ ಎಲ್ಲೆಡೆ ಆತಂಕ ಮನೆ ಮಾಡಿರುವುದು ಕಂಡು ಬಂದಿದೆ.
ರೀಲ್ಸ್ ಮಾಡುವಾಗ ಕಂದಕಕ್ಕೆ ಉರುಳಿ ಬಿದ್ದ ಕಾರು: ಛತ್ರಪತಿ ಸಂಭಾಜಿನಗರ ವ್ಯಾಪ್ತಿಗೆ ಹನುಮಂತನಗರ ನಿವಾಸಿ ಶ್ವೇತಾ ದೀಪಕ್ ಸುರವಾಸೆ (23) ಎಂಬುವರು ಮೃತಪಟ್ಟಿದ್ದಾರೆ. ಆಕೆಯ ಜೊತೆಗೆ ಸ್ನೇಹಿತ ಶಿವರಾಜ್ ಸಂಜಯ ಮುಳೆ ಎಂಬುವರು ಟೊಯೋಟಾ ಎಟಿಯೋಸ್ ಕಾರ್ನಲ್ಲಿ ಮಧ್ಯಾಹ್ನ ದೇವಸ್ಥಾನದ ಬಳಿ ವಾಕಿಂಗ್ ಮಾಡಲು ಬಂದರು. ಈ ಸ್ಥಳದಲ್ಲಿ ಮೊಬೈಲ್‌ನಲ್ಲಿ ರೀಲ್ಸ್ ಮಾಡಲು ಅವಳು ತನ್ನ ಸ್ನೇಹಿತನಿಗೆ ಹೇಳಿದಳು. ಈ ಸಮಯದಲ್ಲಿ ಆಕೆ ಕಾರು ಓಡಿಸುತ್ತಿದ್ದಳು. ಯುವತಿ ಡ್ರೈವಿಂಗ್ ಮಾಡಲು ಹೊಸಬಳಾಗಿರುವುದರಿಂದ ಕಾರನ್ನು ಮುಂದೆ ತೆಗೆದುಕೊಂಡು ಹೋಗುವ ಬದಲು ರಿವರ್ಸ್ ತೆಗೆದುಕೊಂಡಿದ್ದಾಳೆ. ಈ ವೇಳೆ ಕಾರು ರಿವರ್ಸ್ ಆಗಿ ಚಲಿಸಿದ್ದರಿಂದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರ್ನಲ್ಲಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸುಲಿಭಂಜನದಲ್ಲಿರುವ ದತ್ತ ದೇವಾಲಯದ ಬಳಿಯಿರುವ ರಮಣೀಯ ಪರಿಸರವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ, ಈ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ದುರ್ಘಟನೆ ನಡೆದಿದೆ. ದೇವಸ್ಥಾನದ ಜಾಗದಲ್ಲಿ ರಕ್ಷಣಾ ಗೋಡೆ ಅಥವಾ ಕಬ್ಬಿಣದ ಗೋಡೆ ಇದ್ದಿದ್ದರೆ ಈ ಅವಘಡ ತಪ್ಪಿಸಬಹುದಿತ್ತು ಎಂಬ ಚರ್ಚೆ ಸದ್ಯಕ್ಕೆ ನಡೆಯುತ್ತಿದೆ.
ಪೊಲೀಸರಿಂದ ಸ್ಥಳಕ್ಕೆ ಬೇಟಿ, ಪರಿಶೀಲನೆ: ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಖುಲ್ತಾಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಫರಾಟೆ ಹಾಗೂ ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಕಂದಕಕ್ಕೆ ಬಿದ್ದ ಕಾರಿನಿಂದ ಯುವತಿಯನ್ನು ಹೊರತೆಗೆದು ಖುಲ್ತಾಬಾದ್ ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಯುವತಿ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 'ಕವಚ' ಇಲ್ಲದೇ ಗುದ್ದಿಕೊಂಡ ರೈಲುಗಳು: ಸುರಕ್ಷತಾ ವ್ಯವಸ್ಥೆ ವಿಸ್ತರಣೆಗೆ ಹೆಚ್ಚಿದ ಬೇಡಿಕೆ - Bengal Train Accident