ಹೈದರಾಬಾದ್: ರಸ್ತೆಯಲ್ಲಿ ಕಾಗದ ಚೂರುಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಮಹಿಳೆ ಮೇಲೆ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಕಟ್‌ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ 4:30ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೂಸಾಪೇಟ್ ವೈ ಜಂಕ್ಷನ್ ಬಳಿಯ ವಿಷ್ಣುಪ್ರಿಯಾ ಲಾಡ್ಜ್ ಪಕ್ಕದ ವ್ಯಾಪಾರ ಮಳಿಗೆಯ ಸೆಲ್ಲಾರ್‌ನಲ್ಲಿ ಬೆಳಗ್ಗೆ ಸುಮಾರಿಗೆ 45 ವರ್ಷದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಮೃತಳ ಬಟ್ಟೆ ಅಸ್ತವ್ಯಸ್ತವಾಗಿದ್ದು ತೀವ್ರ ರಕ್ತಸ್ರಾವದ ಸ್ಥಿತಿಯಲ್ಲಿ ದೇಹ ಕಂಡು ಬಂದಿದೆ.
ಕೂಡಲೇ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇಬ್ಬರು ಯುವಕರು ಘಟನೆಗೂ ಮುನ್ನ ಘಟನಾ ಸ್ಥಳದ ಪಕ್ಕದ ಓಣಿಯಲ್ಲಿ ಇದೇ ಮಹಿಳೆಯೊಂದಿಗೆ ಕೆಲಕಾಲ ಮಾತನಾಡಿದ್ದಾರೆ. ಬಳಿಕ ಆಕೆಯನ್ನು ಬಲವಂತವಾಗಿ ವ್ಯಾಪಾರ ಮಳಿಗೆಯ ಸೆಲ್ಲಾರ್ಗೆ ಎಳೆದೊಯ್ದಿದ್ದಾರೆ.
ಸ್ವಲ್ಪ ಸಮಯದ ನಂತರ ಆ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಕುಕಟ್‌ಪಲ್ಲಿ ಕಡೆಗೆ ಹೋಗಿರವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನೂ ರಚಿಸಲಾಗಿದೆ ಎಂದು ಕುಕಟ್‌ಪಲ್ಲಿ ಎಸಿಪಿ ಕೆ.ಶ್ರೀನಿವಾಸರಾವ್ ಮತ್ತು ಸಿಐ ಕೃಷ್ಣಮೋಹನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಗ್ಯಾಂಗ್ರೇಪ್: ಆರೋಪಿಗಳಲ್ಲಿ ಇಬ್ಬರು ಅಪ್ತಾಪ್ತರು! - gang rape