ತಿರುಪುರ (ತಮಿಳುನಾಡು): ಪ್ರಧಾನಿ ಮೋದಿ ಅವರು ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಕೇರಳದಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ನಂತರ ತಿರುಪುರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ 'ಎನ್ ಮನ್ ಎನ್ ಮಕ್ಕಳ್' ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು.
ಖಾಸಗಿ ವಿಮಾನದಲ್ಲಿ ಕೊಯಮತ್ತೂರಿನ ವಾಯುಸೇನೆ ನೆಲೆಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತಿರುಪುರ ತಲುಪಿದರು. ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ಹಾಗೂ ಅಣ್ಣಾಮಲೈ ಸೇರಿದಂತೆ ಮತ್ತಿತರರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರು ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದರು. ಆಗ ಜನಸಂದಣಿಯಿಂದ ಪ್ರಧಾನಿ ಮೋದಿಯವರ ವಾಹನದ ಮೇಲೆ ಸೆಲ್ ಫೋನ್ ಎಸೆಯಲಾಯಿತು. ಇದೀಗ ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.
ದೇಶಕ್ಕೆ ತಮಿಳುನಾಡಿನ ಕೊಡುಗೆ ಕುರಿತು ಪ್ರಧಾನಿ ಶ್ಲಾಘನೆ: ನೆರೆಯ ಕೇರಳದಿಂದ ತಮಿಳುನಾಡಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು, ಅಣ್ಣಾಮಲೈ ಮತ್ತು ಕೇಂದ್ರದ ರಾಜ್ಯ ಸಚಿವ ಎಲ್. ಮುರುಗನ್ ಅವರೊಂದಿಗೆ ತೆರೆದ ವಾಹನದಲ್ಲಿ ಹೂವಿನ ಸುರಿಮಳೆ ನಡುವೆಯೇ ರ್‍ಯಾಲಿ ಸ್ಥಳಕ್ಕೆ ತೆರಳಿದ್ದರು.
'ಭಾರತ್ ಮಾತಾ ಕಿ ಜೈ' ಹಾಗೂ 'ವೆಂಡುಂ ಮೋದಿ ಮೀಂದುಂ ಮೋದಿ' (ನಮಗೆ ಮೋದಿ ಬೇಕು, ಮತ್ತೊಮ್ಮೆ ಮೋದಿ) ಎಂಬ ವಿವಿಧ ಘೋಷಣೆಗಳು ಪಕ್ಷದ ಕಾರ್ಯಕರ್ತರಿಂದ ಮೊಳಗಿದವು. ಪ್ರಧಾನಿ ಮೋದಿ ತಮಿಳುನಾಡು ಹಾಗೂ ಅಲ್ಲಿನ ಜನರೊಂದಿಗಿನ ತಮ್ಮ ಸಂಪರ್ಕ ಹೊಂದಿರುವ ಬಗ್ಗೆ ಮಾತನಾಡಿದರು. ಅವರು ಹಿರಿಯ ನಾಯಕರಾದ ಎಂಜಿಆರ್ ಹಾಗೂ ಜಯಲಲಿತಾ ಅವರ ಆಡಳಿತದ ಪರಂಪರೆಯನ್ನು ನೆನಪು ಮಾಡಿಕೊಂಡರು. ರಾಜವಂಶದ ರಾಜಕೀಯವಿಲ್ಲದೇ ಆಡಳಿತಕ್ಕೆ ಎಂಜಿಆರ್ ನೀಡಿದ ಬದ್ಧತೆ ಬಗ್ಗೆ ತಿಳಿಸಿದರು.
ತಮಿಳುನಾಡಿನ 'ಕೊಂಗು' ಪ್ರದೇಶವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು, ಇದು ಭಾರತದ ಬೆಳವಣಿಗೆಯ ಕಥೆಯನ್ನು ತಿಳಿಸುತ್ತದೆ ಎಂದ ಅವರು, ಆರ್ಟಿಕಲ್ 370 ರದ್ದತಿ ಹಾಗೂ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು ಸೇರಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳನ್ನು ಕುರಿತು ಹೇಳಿದರು.
ಜುಲೈ 28, 2023 ರಂದು ರಾಮೇಶ್ವರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದ ಅಣ್ಣಾಮಲೈ ಅವರ 'ಎನ್ ಮನ್ ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಯಾತ್ರೆಯು ಪರಾಕಾಷ್ಠೆಯನ್ನು ಸಾಬೀತು ಪಡಿಸಿತು.
ಇದನ್ನೂ ಓದಿ: ತಿರುಪುರದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ; ದೇಶಕ್ಕೆ ತಮಿಳುನಾಡಿನ ಕೊಡುಗೆ ಕುರಿತು ಪ್ರಧಾನಿ ಶ್ಲಾಘನೆ