ಗೋಪಾಲಗಂಜ್ (ಬಿಹಾರ್): ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಬಿಹಾರದ ಒಬ್ಬ ಅಪ್ರಾಪ್ತ ಹಾಗೂ ಇನ್ನೋರ್ವ ಯುವಕ ಸಾವನ್ನಪ್ಪಿದ್ದು ಅವರ ಮೃತದೇಹಗಳನ್ನು ಪೋಷಕರು ಸ್ವಗ್ರಾಮಕ್ಕೆ ಹಿಂತಿರುಗಿಸಲು ಅನುಕೂಲ ಮಾಡಿಕೊಡುವಂತೆ ಮಣಿಪುರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸುನಾಲಾಲ್ ಕುಮಾರ್ (18) ಮತ್ತು ದಶರತ್ ಕುಮಾರ್ (17) ಮೃತರಾಗಿದ್ದು, ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ರಾಜವಾಹಿ ಗ್ರಾಮದ ನಿವಾಸಿಗಳು. ವಲಸೆ ಕಾರ್ಮಿಕರಾಗಿ ಇವರು ಕೆಲಸ ಮಾಡಲು ಮಣಿಪುರಕ್ಕೆ ತೆರಳಿದ್ದರು.
ಅಲ್ಲಿ ಅವರನ್ನು ಶೂಟ್ ಮಾಡಿ ಕೊಂದು ಹಾಕಲಾಗಿದೆ. ದೀಪಾವಳಿ ಬಳಿಕ ಹೆಚ್ಚುವರಿ ಹಣ ಸಂಪಾದಿಸಲು ಈ ಇಬ್ಬರು ಮಣಿಪುರಕ್ಕೆ ಹೋಗಿದ್ದರು ಎಂದು ಕುಟುಂಬಗಳು ತಿಳಿಸಿವೆ. ಮೃತ ದಶರತ್ ಕುಮಾರ್ ಅವರ ತಾಯಿ ರಾಧಿಕಾ ದೇವಿ ಮಾಧ್ಯಮದ ಬಳಿ, "ಮಣಿಪುರದಲ್ಲಿ ಸಂಘರ್ಷವಿದೆ ಎಂದು ನಮಗೆ ತಿಳಿದಿರಲಿಲ್ಲ, ನಮಗೆ ತಿಳಿದಿದ್ದರೆ, ನಾನು ನನ್ನ ಮಗನನ್ನು ಅಲ್ಲಿಗೆ ಕಳುಹಿಸುತ್ತಿರಲಿಲ್ಲ. ಅವನಿಗೆ ಕೇವಲ 17 ವರ್ಷ. ನನಗೆ ನನ್ನ ಮಗನ ಮುಖ ಒಮ್ಮೆ ನೋಡಬೇಕು. ನಾನು ಸರ್ಕಾರಕ್ಕೆ ಅದನ್ನೇ ಕೇಳುತ್ತಿದ್ದೇನೆ" ಎಂದು ಕಣ್ಣೀರು ಹಾಕಿದ್ದಾರೆ.
ಏನು ಮಾಡಬೇಕು ಎನ್ನುವುದು ಗೊತ್ತಾಗದೇ ಚಿಂತಿತರಾಗಿದ್ದೇವೆ: ದಶರಥ್ ಕುಮಾರ್ ಅವರ ತಂದೆ ಮೋಹನ್ ಸೋಹನ್ ಅವರ ಇನ್ನೊಬ್ಬ ಮಗ ಕೂಡ ದಶರತ್ ಅವರೊಂದಿಗೆ ತೆರಳಿದ್ದ. ಆತನಿಂದಲೇ ಮಗನ ಸಾವಿನ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. "ನನಗೆ ನನ್ನ ಇನ್ನೊಬ್ಬ ಮಗನಿಂದ ಕರೆ ಬಂತು. ಅವನ ಹೆಸರು ಸಂತೋಷ್. ಅವನು ನನಗೆ 'ಅಪ್ಪ, ನನ್ನ ಸಹೋದರ ಸಾವನ್ನಪ್ಪಿದ್ದಾನೆ ಮತ್ತು ಸುನಾಲಾಲ್ ಸಹ ಸತ್ತಿದ್ದಾನೆ ಎಂದು ಹೇಳಿದ್ದಾನೆ'. ಆ ಸುದ್ದಿ ಬಂದ ನಂತರ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಜನರೊಂದಿಗೆ ಮಾತನಾಡುತ್ತಿದ್ದೇವೆ. ಏನು ಮಾಡಬೇಕೆಂದು ತೋಚುತ್ತಿಲ್ಲ, ಕಳೆದುಹೋಗಿದ್ದೇವೆ" ಎಂದು ತಂದೆ ಕಣ್ಣೀರು ಹಾಕಿದ್ದಾರೆ.
ಇನ್ನು ಮೃತ ಸುನಾಲಾಲ್ ಕುಮಾರ್ ತಾಯಿ "ನನ್ನ ಮಗನನ್ನು ಅವರು ಸಾಯಿಸಿದ್ದಾರೆ. ದೀಪಾವಳಿಯ ನಂತರ ಸ್ವಲ್ಪ ಹಣ ಸಂಪಾದಿಸಲು ಮಣಿಪುರಕ್ಕೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದ" ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹತ್ಯೆ ಖಂಡಿಸಿದ ಸಿಎಂ ಬಿರೇನ್ ಸಿಂಗ್: ಇದಕ್ಕೂ ಮೊದಲು, ಮಣಿಪುರ ಸಿಎಂ ಬಿರೇನ್ ಸಿಂಗ್ ಇಬ್ಬರ ಹತ್ಯೆಯನ್ನು ಖಂಡಿಸಿದ್ದು, ಇದನ್ನು ಭಯೋತ್ಪಾದನಾ ಕೃತ್ಯ ಎಂದು ಕರೆದಿದ್ದಾರೆ. ಬಿಹಾರದ ಸುನಾಲಾಲ್ ಕುಮಾರ್ ಮತ್ತು ದಶರತ್ ಕುಮಾರ್ ಅವರ ಕ್ರೂರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಮಣಿಪುರದ ಕಕ್ಚಿಂಗ್ ಜಿಲ್ಲೆಯ ಈ ಭಯೋತ್ಪಾದನಾ ಕೃತ್ಯವು ನಮ್ಮ ಮೌಲ್ಯಗಳ ಮೇಲೆ ನೇರವಾದ ದಾಳಿಯಾಗಿದೆ ಮತ್ತು ಅವರ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಎಂದು X ನ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಮೃತರ ಕುಟುಂಬಗಳಿಗೆ ಸಿಎಂ 10 ಲಕ್ಷ ಪರಿಹಾರ ಘೋಷಣೆ: ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಹತ್ಯೆ ಖಂಡಿಸಿದ್ದು, ಮೃತರ ಕುಟುಂಬಕ್ಕೆ ನಿಯಮಾನುಸಾರ ಸವಲತ್ತುಗಳನ್ನು ನೀಡುವಂತೆ ಹಾಗೂ ಇಬ್ಬರ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ನೀಡಲು ಸೂಚಿಸಿದ್ದೇನೆ. ಇದರೊಂದಿಗೆ ಕಾರ್ಮಿಕ ಸಂಪನ್ಮೂಲ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿರುವ ಯೋಜನೆಗಳಿಂದ ನಿಯಮಾನುಸಾರ ಇತರ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿದ್ದೇನೆ. ದೆಹಲಿಯಲ್ಲಿರುವ ಬಿಹಾರದ ರೆಸಿಡೆಂಟ್ ಕಮಿಷನರ್ ಕೂಡ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಮತ್ತು ಸಾಧ್ಯವಿರುವ ಎಲ್ಲ ನೆರವು ನೀಡಲು, ಮೃತರ ಮೃತದೇಹಗಳನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಿ ಎಂದು ಸಿಎಂ ಆದೇಶಿಸಿದ್ದಾರೆ.
ಇದನ್ನೂ ಓದಿ: ಕೋಚಿಂಗ್ ಸೆಂಟರ್ನಲ್ಲಿ ಅನಿಲ ಸೋರಿಕೆಯಾಗಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿಗಳು: ಸಂಸ್ಥೆಯನ್ನೇ ಸೀಲ್ ಮಾಡುವಂತೆ ಪ್ರತಿಭಟನೆ