ಹೋಶಿಯಾರ್‌ಪುರ(ಪಂಜಾಬ್): ಸರಕು ಸಾಗಣೆ ರೈಲೊಂದು ಲೋಕೋ ಪೈಲಟ್ ಇಲ್ಲದೆ 78 ಕಿಲೋ ಮೀಟರ್ ವರೆಗೆ 80 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಚಲಿಸಿದ ಅಚ್ಚರಿಯ ಘಟನೆ ನಡೆದಿದೆ. ಜಮ್ಮು ಕಾಶ್ಮೀರದ ಕಥುವಾದಿಂದ ಪಂಜಾಬ್‌ನ ಹೋಶಿಯಾರ್ಪುರ್ದವರೆಗೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಇಲ್ಲದೇ ಸರಕು ಸಾಗಣೆ ರೈಲು (14806R) ಚಲಿಸಿದೆ. ಈ ಘಟನೆ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತನಿಖೆಗೆ ಆದೇಶಿಸಿದ್ದಾರೆ.
78 ಕಿ.ಮೀ. ವರೆಗೆ ಲೋಕೋ ಪೈಲಟ್ ಇಲ್ಲದೇ ರೈಲು ಚಲಿಸಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ. ಕಥುವಾ ರೈಲು ನಿಲ್ದಾಣದಲ್ಲಿ ರೈಲು ನಿಂತಿತ್ತು. ಬಳಿಕ ಇಳಿಜಾರಿನ ಗ್ರೇಡಿಯಂಟ್ ಟ್ರ್ಯಾಕ್‌ನಲ್ಲಿ ರೈಲು ಚಲಿಸಲು ಪ್ರಾರಂಭಿಸಿತು. ಪಂಜಾಬ್‌ನ ಹೋಶಿಯಾರ್‌ಪುರದವರೆಗೆ ಪ್ರಯಾಣಿಸಿ ಅಲ್ಲಿನ ಉಂಚಿ ಬಸ್ಸಿ ರೈಲು ನಿಲ್ದಾಣದ ಬಳಿ ಇದನ್ನು ನಿಲ್ಲಿಸಲಾಗಿದೆ. ಮರದ ಸ್ಟಾಪರ್‌ಗಳನ್ನು ಬಳಸಿ ರೈಲು ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ರೈಲು ನಿಲ್ದಾಣದಲ್ಲಿ ಲೋಕೋ ಪೈಲಟ್ ಹ್ಯಾಂಡ್‌ಬ್ರೇಕ್ ಹಾಕದೇ ರೈಲಿನಿಂದ ಕೆಳಗಿಳಿದಿದ್ದರು. ಇಳಿಜಾರು ಇದ್ದ ಹಿನ್ನೆಲೆಯಲ್ಲಿ ರೈಲು ಪಂಜಾಬ್‌ನ ಪಠಾಣ್‌ಕೋಟ್ ಕಡೆಗೆ ಚಲಿಸಲು ಪ್ರಾರಂಭಿಸಿತು. ಇದು ರೈಲ್ವೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ, ಕಥುವಾ ರೈಲು ನಿಲ್ದಾಣದಲ್ಲಿಯೇ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ರೈಲಿನ ವೇಗ ಅದಾಗಲೇ ಹೆಚ್ಚಾಗಿದ್ದರಿಂದ ನಿಲ್ಲಿಸಲು ಸಾಧ್ಯವಾಗಿಲ್ಲ. ರೈಲು ಶೀಘ್ರದಲ್ಲೇ ಗಂಟೆಗೆ 80 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಓಡಲಾರಂಭಿಸಿದ್ದರಿಂದ ನಿಲ್ಲಿಸಲು ರೈಲ್ವೆ ಸಿಬ್ಬಂದಿಗೆ ಸಾಧ್ಯವಾಗಿಲ್ಲ.
ಕಥುವಾ ರೈಲ್ವೆ ನಿಲ್ದಾಣದ ಅಧಿಕಾರಿಗಳು ಮುಂದಿನ ನಿಲ್ದಾಣ ಪಠಾಣ್‌ಕೋಟ್‌ನ ಸುಜಾನ್‌ಪುರ ರೈಲು ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ, ರೈಲು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ ರೈಲಿನ ವೇಗ ಕಡಿಮೆಯಾಗದ ಹಿನ್ನೆಲೆಯಲ್ಲಿ ಮುಂದಿನ ನಿಲ್ದಾಣದಲ್ಲೂ ಸಾಧ್ಯವಾಗಿಲ್ಲ. ನಂತರ, ಪಠಾಣ್‌ಕೋಟ್ ಕ್ಯಾಂಟ್, ಕಂಡ್ರೋಡಿ, ಮಿರ್ಥಲ್, ಮುಕೇರಿಯನ್ ನಿಲ್ದಾಣಗಳಲ್ಲಿ ರೈಲು ನಿಲ್ಲಿಸಲು ಸಿಬ್ಬಂದಿ ಪ್ರಯತ್ನಿಸಿದ್ದರೂ ಆಗಿರಲಿಲ್ಲ. ಆದರೆ ಅಂತಿಮವಾಗಿ, ರೈಲಿನ ವೇಗವು ಕಡಿಮೆಯಾಗಲು ಪ್ರಾರಂಭಿಸಿತ್ತು. ಬಳಿಕ ಹೋಶಿಯಾರ್‌ಪುರದ ಉಂಚಿ ಬಸ್ಸಿ ರೈಲು ನಿಲ್ದಾಣದ ಬಳಿ ಮರದ ಸ್ಟಾಪರ್‌ಗಳೊಂದಿಗೆ ರೈಲನ್ನು ನಿಲ್ಲಿಸುವಲ್ಲಿ ರೈಲ್ವೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಕಾರಣ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳನ್ನು ತಡೆಗಟ್ಟುವುದಕ್ಕಾಗಿ ಈ ಘಟನೆ ಹಿಂದಿನ ಭದ್ರತಾ ಲೋಪಗಳನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಲಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಸರಿಯಾದ ರೈಲು ಬ್ರೇಕ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಷ್ಠಾನಗೊಳಿಸುವುದು, ನಿಯಮಿತ ನಿರ್ವಹಣೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಮ್ಮು ರೈಲ್ವೆ ವಿಭಾಗದ ಟ್ರಾಫಿಕ್ ಮ್ಯಾನೇಜರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಚಾಲಕ ರಹಿತ ಮೆಟ್ರೋ: ಹಳಿಗಳ ಮೇಲೆ ಬೋಗಿಗಳ ಜೋಡಣೆ - Photo