ಪಾಟ್ನಾ, ಬಿಹಾರ: ಐದು ವರ್ಷದ ನರ್ಸರಿ ವಿದ್ಯಾರ್ಥಿ ಹ್ಯಾಂಡ್ ಗನ್ ತಂದು ಅದೇ ಶಾಲೆಯಲ್ಲಿ ಕಲಿಯುತ್ತಿದ್ದ 10 ವರ್ಷದ 3ನೇ ತರಗತಿ ಬಾಲಕನ ಮೇಲೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ಬಿಹಾರದ ಸೊಪೌಲ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ತ್ರಿವೇಣಿಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೆಂಟ್ ಜೋಸೆಫ್ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಶಾಲೆಯಲ್ಲಿ ಅಸೆಂಬ್ಲಿ ವೇಳೆ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಶವ್ ಯಾದವ್ ತಿಳಿಸಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಬಾಲಕನ ಕೈಗೆ ಮಾತ್ರ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ 3ನೇ ತರಗತಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಮಾತನಾಡಿರುವ ಸೆಂಟ್ ಜಾನ್ಸ್ ಶಾಲೆ ಆಡಳಿತ ಮಂಡಳಿ, ಶಿಕ್ಷಕರು 5 ವರ್ಷದ ಬಾಲಕನ ಬಳಿಯಿದ್ದ ಗನ್ ಅನ್ನು ವಶಕ್ಕೆ ಪಡೆದು, ಅವರ ಪೋಷಕರನ್ನು ಶಾಲೆಗೆ ಕರೆದಿದ್ದಾರೆ. ಜೊತೆಗೆ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಟೇಬಲ್ ಮೇಲೆ ಇಟ್ಟಿದ್ದ ಗನ್ ಅನ್ನು ಅವಕಾಶ ನೋಡಿ ಬಾಲಕ ಶಾಲೆಗೆ ತಂದಿರುವುದಾಗಿ ಕೃತ್ಯ ಎಸಗಿದ ಬಾಲಕನ ತಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆ ತಿಳಿದಾಕ್ಷಣ ಆತಂಕಗೊಂಡ ಶಾಲೆಗೆ ಪೋಷಕರು ಮತ್ತು ನಿವಾಸಿಗಳ ಆಗಮಿಸಿದ್ದು, ಶಾಲೆ ಒಳ ಮತ್ತು ಹೊರಗೆ ಜನರು ಕಿಕ್ಕಿರಿದು ನಿಂತ ದೃಶ್ಯಗಳು ಕಂಡು ಬಂದಿತು. ಸದ್ಯ ಪೋಷಕರ ಆಕ್ರೋಶವನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಲಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪ್ರಕರಣ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದು, ಮಗು ಹೇಗೆ ಗನ್ ಶಾಲೆಗೆ ತಂದಿತು ಎಂದು ತನಿಖೆಗೆ ಮುಂದಾಗಿದ್ದಾರೆ. ಇದೇ ವೇಳೆ, ಈ ಗನ್ ಲೈಸೆನ್ಸ್ ಹೊಂದಿದ್ಯಾ ಇಲ್ಲವೇ ಎಂಬ ಬಗ್ಗೆ ಕೂಡ ತನಿಖೆ ಮಾಡಲಾಗುವುದು, ತನಿಖೆ ಅನುಸಾರವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಈ ಘಟನೆಯು ಶಾಲೆಯಲ್ಲಿ ಭದ್ರತೆ ಕ್ರಮಗಳ ಬಗ್ಗೆ ಕಾಳಜಿ ಮೂಡಿಸಿದೆ. ಶಾಲೆಯ ಆಡಳಿತದ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಭದ್ರತಾ ಲೋಪದ ಕುರಿತು ಕೂಡ ಶೀಘ್ರದಲ್ಲೇ ತಿಳಿಸಲಾಗುವುದು ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಏರ್ಗನ್ನೊಂದಿಗೆ ಆಟವಾಡುವಾಗ ಮಿಸ್‌ಫೈರ್, ಚಿಕ್ಕಮಗಳೂರಿನಲ್ಲಿ 7 ವರ್ಷದ ಬಾಲಕ ಸಾವು