ಹೈದರಾಬಾದ್ : ಟಾಸ್ಕ್ ಫೋರ್ಸ್ನ ಮಾಜಿ ಡಿಸಿಪಿ ರಾಧಾಕಿಶನ್ ರಾವ್ ವಿರುದ್ಧ ಜೂಬಿಲಿ ಹಿಲ್ಸ್ನಲ್ಲಿ ದಾಖಲಾಗಿರುವ ಅಪಹರಣ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ, ಈ ಪ್ರಕರಣದಲ್ಲಿ, ನಿರ್ಮಾಪಕ ಮತ್ತು ಮೈತ್ರಿ ಮೂವೀಸ್ (ಚಲನಚಿತ್ರ ನಿರ್ಮಾಣ ಸಂಸ್ಥೆ) ಮಾಲೀಕ ಯೆರ್ನೇನಿ ನವೀನ್ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.
ಫೋನ್ ಕದ್ದಾಲಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಜಿ ಡಿಸಿಪಿ ರಾಧಾಕಿಶನ್ ರಾವ್, ಇನ್ಸ್ಪೆಕ್ಟರ್ ಗಟ್ಟುಮಲ್ಲು, ಎಸ್. ಎಸ್ ಮಲ್ಲಿಕಾರ್ಜುನ್ ಸೇರಿ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗೊತ್ತಾಗಿದೆ. ಈ ವಿಷಯ ತಿಳಿದ ಎನ್‌ಆರ್‌ಐ ಹಾಗೂ ಉದ್ಯಮಿ ಚೆನ್ನುಪತಿ ವೇಣುಮಾಧವ್ ಜುಬಿಲಿ ಹಿಲ್ಸ್ ಪೊಲೀಸರನ್ನು ಸಂಪರ್ಕಿಸಿ, ಟ್ಯಾಪಿಂಗ್ ಪ್ರಕರಣದ ಹಲವು ಆರೋಪಿಗಳು ಈ ಹಿಂದೆ ತನ್ನನ್ನು ಅಪಹರಿಸಿ ಕಂಪನಿಯ ಷೇರುಗಳನ್ನು ಬಲವಂತವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಉದ್ಯಮಿ ಚೆನ್ನುಪತಿ ವೇಣುಮಾಧವ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಧಾಕಿಶನ್ ರಾವ್ ಎಂಬುವರು ಅಪಹರಿಸಿ ಬೆದರಿಕೆ ಹಾಕಿದ್ದು, ಸಿಐ ಗಟ್ಟುಮಲ್ಲು ತಂಡಕ್ಕೆ ರೂ.10 ಲಕ್ಷ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
2011ರಲ್ಲಿ ಕ್ರಿಯಾ ಹೆಸರಿನಲ್ಲಿ ಆರೋಗ್ಯ ಸೇವೆ ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಿರುವ ವೇಣು ಮಾಧವ್, ಆಂಧ್ರಪ್ರದೇಶದಲ್ಲಿ ಆರೋಗ್ಯ ಕೇಂದ್ರ, ಖಮ್ಮಂನಲ್ಲಿ ಟೆಲಿಮೆಡಿಸಿನ್, ರಾಷ್ಟ್ರೀಯ ಹೆದ್ದಾರಿಗಳಲ್ಲಿ ತುರ್ತು ವಾಹನಗಳನ್ನು ಸ್ಥಾಪಿಸಿದ್ದೇನೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಹೆಲ್ತ್‌ಕೇರ್ ಸೆಂಟರ್‌ಗಳ ಪ್ರಾಜೆಕ್ಟ್ ಪಡೆದಿದ್ದ ಸಂದರ್ಭದಲ್ಲಿ ಸೂರೆಡ್ಡಿ ಗೋಪಾಲ ಕೃಷ್ಣ, ರಾಜಶೇಖರ್ ತಳಸೀಲ, ಎರ್ನೇನಿ ನವೀನ್, ಮಂಡಲಪು ರವಿಕುಮಾರ್ ಅವರನ್ನು ಅರೆಕಾಲಿಕ ನಿರ್ದೇಶಕರನ್ನಾಗಿ ಹಾಗೂ ಇದೇ ಸಮಯದಲ್ಲಿ ಬಾಲಾಜಿ ಅವರನ್ನು ಸಿಇಒ ಆಗಿ ನೇಮಿಸಿದ್ದಾಗಿ ವೇಣು ಮಾಧವ್ ದೂರಿನಲ್ಲಿ ತಿಳಿಸಿದ್ದಾರೆ.
'ನನಗೆ ಪರಿಚಯವಿದ್ದ ಚಂದ್ರಶೇಖರ್ ವೇಗಿ ನನ್ನ ಕಂಪನಿಯ ನಿರ್ದೇಶಕರೊಂದಿಗೆ ಶಾಮೀಲಾಗಿ ಷೇರುಗಳನ್ನು ಖರೀದಿಸಿ, ಇಡೀ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದರು. ನಾನು ಒಪ್ಪಿಗೆ ನೀಡದ ಕಾರಣ ಟಾಸ್ಕ್ ಫೋರ್ಸ್ ಡಿಸಿಪಿ ರಾಧಾಕಿಶನ್ ರಾವ್, ಎಸ್ ಐ ಮಲ್ಲಿಕಾರ್ಜುನ್ ಹಾಗೂ ಮತ್ತೊಬ್ಬ ಇನ್ಸ್ಪೆಕ್ಟರ್ ನೆರವಿನಿಂದ ಡಿಸಿಪಿ ಕಚೇರಿಯಲ್ಲಿಯೇ ನನ್ನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ' ಎಂದು ವೇಣು ಮಾಧವ್ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಮಾಧ್ಯಮಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಹೇಳಿದರೆ ಪರಿಣಾಮ ತೀವ್ರವಾಗಿರುತ್ತದೆ ಎಂದು ಹೆದರಿಸಿದ್ದರು. ಇತ್ತೀಚೆಗೆ ರಾಧಾಕಿಶನ್ ರಾವ್ ಬಂಧನದ ಸುದ್ದಿ ಕೇಳಿ ದೂರು ನೀಡುತ್ತಿದ್ದೇನೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಕಲಂ 386, 365, 341, 120 ಬಿ ರೆಡ್ ವಿಥ್ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಪ್ರಮುಖ ವಿಕೆಟ್ ಔಟ್: ಟಾಸ್ಕ್ಫೋರ್ಸ್ ಮಾಜಿ ಒಎಸ್ಡಿ ಅರೆಸ್ಟ್ - Phone Tapping Case