ಅಮರಾವತಿ (ಮಹಾರಾಷ್ಟ್ರ): ಮದುವೆಗೆ ವಯಸ್ಸಿನ ಮಿತಿ ಇಲ್ಲ ಎಂದು ವೃದ್ಧ ಜೋಡಿ ಮದುವೆಯಾಗಿ ಸಮಾಜಕ್ಕೆ ಸಂದೇಶ ಸಾರಿದೆ. ಇಲ್ಲಿಯ ಚಿಂಚೋಳಿ ರಹಿಮಾಪುರ ಎಂಬಲ್ಲಿ 80 ವರ್ಷದ ವಿಠ್ಠಲ್ ಖಂಡಾರೆ 65 ವರ್ಷದ ಇಂದುಬಾಯಿ ದಾಬಡೆ ಎಂಬುವವರೊಂದಿಗೆ ವಿವಾಹವಾಗಿದ್ದಾರೆ.
ಅಂಜನಗಾಂವ್ ಸುರ್ಜಿ ತಾಲೂಕಿನ ಚಿಂಚೋಳಿ ರಹಿಮಾಪುರದಲ್ಲಿ ವಾಸವಾಗಿರುವ ವಿಠ್ಠಲ್ ಅವರು ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದು, ಇದು ಅವರ ಮೂರನೇ ವಿವಾಹವಾಗಿದೆ. ವಿಠ್ಠಲರಾವ್ ಅವರ ಎರಡನೇ ಪತ್ನಿ ಮೂರ್ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ತಮಗೆ ಒಂಟಿತನ ಕಾಡುತ್ತಿದೆ ಎಂದು ಮೊಮ್ಮಕ್ಕಳ ಮುಂದೆ ಬೆಸರ ವ್ಯಕ್ತಪಡಿಸಿ ಮತ್ತೊಂದು ಮದುವೆ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಹಲವರು ವಿರೋಧಿಸಿದರೂ, ಮಗ ಮತ್ತು ಸೊಸೆ ಒಪ್ಪಿಗೆ ಸೂಚಿಸಿದರು.
ಅದರಂತೆ ವಿಠ್ಠಲರಾವ್ ಅವರ ವಿವಾಹವು ಅಕೋಲಾ ಜಿಲ್ಲೆಯ ಅಕೋಟ್‌ನ ಇಂದುಬಾಯಿ ಜೊತೆ ಚಿಂಚೋಳಿ ರಹಿಮಾಪುರದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಗ್ರಾಮದ ಜನತೆ ಭಾಗವಹಿಸಿ ಅದ್ಧೂರಿಯಾಗಿ ಮದುವೆ ನೆರವೇರಿಸಿದರು. ಜೊತೆಗೆ ಸಮಾರಂಭದಲ್ಲಿ ಹಲವು ಗಣ್ಯರು ಕುಟುಂಬ ಸಮೇತರಾಗಿ ಆಗಮಿಸಿ ವೃದ್ಧ ಜೋಡಿಗೆ ಶುಭ ಹಾರೈಸಿದ್ದಾರೆ.
ಗ್ರಾಮದಲ್ಲಿ ಹೆಣ್ಣು ಸಿಗದೆ ಮದುವೆಯಾಗದೆ ಉಳಿದಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ಯುವಕರಿಗೆ ಕನ್ಯೆಯರನ್ನು ಹುಡುಕುವುದೇ ಕಷ್ಟವಾಗಿದೆ. ಅಂತಹದರಲ್ಲಿ ಈ ಅಜ್ಜನಿಗೆ ಮೂರನೇ ಮದುವೆಯಾಗಿದೆ ಎಂದು ಸಮಾರಂಭಕ್ಕೆ ಬಂದ ಜನರು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದರು.
ಇತ್ತೀಚೆಗೆ ಮಾಧ್ಯಮ ದಿಗ್ಗಜ 92 ವರ್ಷದ ಬಿಲಿಯನೇರ್, ರೂಪರ್ಟ್ ಮುರ್ಡೋಕ್ ಕೂಡ 67 ವರ್ಷದ ರಷ್ಯಾದ ನಿವೃತ್ತ ಜೀವಶಾಸ್ತ್ರಜ್ಞೆ ಎಲೆನಾ ಝುಕೋವಾ ಅವರನ್ನು ವಿವಾಹವಾಗಿ ಸುದ್ದಿಯಲ್ಲಿದ್ದರು.
ಇದನ್ನೂ ಓದಿ: ಮೈಸೂರಿನಲ್ಲೊಂದು ಮಂತ್ರ ಮಾಂಗಲ್ಯ: 14 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ - Mantra Mangalya