ನವದೆಹಲಿ/ಗಾಜಿಯಾಬಾದ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾರ್ಕಿಂಗ್ ಸಮಸ್ಯೆ ವಿಪರೀತವಾಗಿದ್ದು, ವಾಹನಗಳ ನಿಲುಗಡೆಗೆ ಮಾಲೀಕರು ಪರದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (ಎನ್‌ಸಿಆರ್‌ಟಿಸಿ) ದೆಹಲಿ- ಮೀರತ್ ಕಾರಿಡಾರ್ ಸಂಪರ್ಕಿಸುವ ಪ್ರದೇಶದಲ್ಲಿ ಏಕಕಾಲಕ್ಕೆ 8 ಸಾವಿರ ವಾಹನಗಳು ಒಂದೇ ಕಡೆ ನಿಲ್ಲಲು ಪಾರ್ಕಿಂಗ್ ಕೇಂದ್ರವನ್ನು ನಿರ್ಮಾಣ ಮಾಡಿದೆ.
ಆರ್‌ಆರ್‌ಟಿಎಸ್ ನಿಲ್ದಾಣಗಳಲ್ಲಿ ನಿರ್ಮಿಸಲಾಗಿರುವ ಪಾರ್ಕಿಂಗ್ ಸ್ಥಳಗಳು 5 ರಿಂದ 10 ಕಿ.ಮೀ ದೂರದ ಅಂತರದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ವಾಹನಗಳನ್ನು ಇಲ್ಲಿ ಏಕಕಾಲದಲ್ಲಿ ನಿಲುಗಡೆ ಮಾಡಬಹುದು. ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಎನ್‌ಸಿಆರ್‌ಟಿಸಿ ಈ ಕ್ರಮ ಕೈಗೊಂಡಿದೆ.
ಎನ್‌ಸಿಆರ್‌ಟಿಸಿ ಹೇಳಿಕೆಯಂತೆ, ದೆಹಲಿ-ಮೀರತ್ ಕಾರಿಡಾರ್ ಸಂಪೂರ್ಣ ಪೂರ್ಣಗೊಂಡ ನಂತರ, ಸಾರ್ವಜನಿಕ ಸಾರಿಗೆಯ ಬಳಕೆ ಹೆಚ್ಚಾಗಲಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ ಬಳಕೆಯ ಪಾಲು ಈಗಿರುವ ಶೇ.37ರಿಂದ ಶೇ.63ಕ್ಕೆ ಏರಿಕೆಯಾಗಲಿದೆ. ಕಾರಿಡಾರ್‌ನಲ್ಲಿ ಸಿದ್ಧವಾಗುತ್ತಿರುವ ಪಾರ್ಕಿಂಗ್ ಸ್ಥಳಗಳಲ್ಲಿ 1,600 ಕ್ಕೂ ಹೆಚ್ಚು ನಾಲ್ಕು ಚಕ್ರಗಳು ಮತ್ತು 6,500 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದೆ.
ಪಾರ್ಕಿಂಗ್ ಶುಲ್ಕ ಎಷ್ಟು?: ಪಾರ್ಕಿಂಗ್ ಸ್ಥಳಗಳಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ಬರುವ ವಾಹನಗಳಿಗೆ ಮೊದಲ 10 ನಿಮಿಷಗಳವರೆಗೆ ಯಾವುದೇ ಶುಲ್ಕ ಇರುವುದಿಲ್ಲ. 10 ನಿಮಿಷದ ನಂತರ ಮತ್ತು ಗರಿಷ್ಠ 6 ಗಂಟೆಗಳವರೆಗೆ ಸೈಕಲ್‌ಗಳಿಗೆ 5 ರೂಪಾಯಿ, ದ್ವಿಚಕ್ರ ವಾಹನಗಳಿಗೆ 10, ನಾಲ್ಕು ಚಕ್ರದ ವಾಹನಗಳಿಗೆ 25 ರೂಪಾಯಿ ಪಾವತಿಸಬೇಕು.
6 ರಿಂದ 12 ಗಂಟೆ ಅವಧಿವರೆಗಿನ ನಿಲುಗಡೆಗೆ ಸೈಕಲ್‌ಗೆ 5 ರೂಪಾಯಿ, ದ್ವಿಚಕ್ರ ವಾಹನಕ್ಕೆ 25, ನಾಲ್ಕು ಚಕ್ರದ ವಾಹನಗಳಿಗೆ 50 ರೂಪಾಯಿ ಮತ್ತು 12 ಗಂಟೆಗಳಿಗೂ ಅಧಿಕ ನಿಲುಗಡೆಗೆ ಸೈಕಲ್‌ಗೆ 10 ರೂ., ದ್ವಿಚಕ್ರ ವಾಹನಕ್ಕೆ 30 ರೂಪಾಯಿ, ಕಾರುಗಳಿಗೆ 100 ರೂಪಾಯಿ ಶುಲ್ಕ ಇರಲಿದೆ. ರಾತ್ರಿ ವೇಳೆಯ ಪಾರ್ಕಿಂಗ್‌ಗೆ ಸೈಕಲ್‌ಗಳಿಗೆ 20 ರೂಪಾಯಿ, ದ್ವಿಚಕ್ರ ವಾಹನಗಳಿಗೆ 60, ಕಾರುಗಳಿಗೆ 200 ವಿಧಿಸಲಾಗುತ್ತದೆ.
ದಟ್ಟಣೆ ತಗ್ಗಿಸಲು ಪಾರ್ಕಿಂಗ್: ದೆಹಲಿಯಿಂದ ಮೀರತ್‌ವರೆಗಿನ ಕಾರಿಡಾರ್‌ನಲ್ಲಿ 25 ನಿಲ್ದಾಣಗಳಿವೆ. ಈ ನಿಲ್ದಾಣಗಳಲ್ಲಿ ವಾಹನ ದಟ್ಟಣೆ ತಗ್ಗಿಸಲು ಈ ಪಾರ್ಕಿಂಗ್ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಅತಿ ದೊಡ್ಡ ಪಾರ್ಕಿಂಗ್ ಇರುವುದು ಮೀರತ್ ದಕ್ಷಿಣ ನಿಲ್ದಾಣ ಭಾಗದಲ್ಲಿ. ಅಲ್ಲಿ ಸುಮಾರು 300 ಕಾರುಗಳು ಮತ್ತು 900 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ದೆಹಲಿಯ ಸರಾಯ್ ಕಾಲೇ ಖಾನ್ ನಿಲ್ದಾಣದಲ್ಲಿ ಎರಡನೇ ಅತಿದೊಡ್ಡ ಪಾರ್ಕಿಂಗ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲಿ ಸುಮಾರು 275 ಕಾರುಗಳು ಮತ್ತು 900 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು.
ಪಾರ್ಕಿಂಗ್ ನಿಲ್ದಾಣಗಳಲ್ಲಿ ಆಟೋ ರಿಕ್ಷಾವನ್ನು ಸಹ ನಿಲ್ಲಿಸುವ ಸೌಲಭ್ಯವಿದೆ. ಬಸ್ ನಿಲ್ದಾಣಗಳಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ಸುಲಭವಾಗಿರುವಂತೆ ನೋಡಿಕೊಳ್ಳಲಾಗಿದೆ. ಮುಖ್ಯರಸ್ತೆಯಿಂದ ಬರುವ ವಾಹನಗಳು ಸುಲಭವಾಗಿ ಪ್ರಯಾಣಿಕರನ್ನು ನಿಲ್ದಾಣದಲ್ಲಿ ಪಿಕ್ ಮತ್ತು ಡ್ರಾಪ್ ಮಾಡುವ ರೀತಿಯಲ್ಲಿ ಈ ನಿಲ್ದಾಣಗಳನ್ನು ವಿನ್ಯಾಸಗೊಳಿಸಲಾಗಿದೆ.
ಬ್ಯಾಟರಿ ಕೇಂದ್ರ ಸ್ಥಾಪನೆಗೆ ಯೋಜನೆ: ವಿಕಲಚೇತನ ಪ್ರಯಾಣಿಕರ ಪ್ರಯಾಣಕ್ಕಾಗಿ ವಾಹನ ನಿಲುಗಡೆಗೆ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ. ಎಲೆಕ್ಟ್ರಿಕ್ ವಾಹಗಳಿಗೆ ಚಾರ್ಜಿಂಗ್ ಮಾಡಲು ಬ್ಯಾಟರಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.