ಗುವಾಹಟಿ/ಇಂಫಾಲ್: ಅಸ್ಸೋಂನ ಗೋಲಾಘಾಟ್ ಜಿಲ್ಲೆಯ ಲಚಿತ್ ಬೊರ್ಫುಕನ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 7 ಪ್ರಶಿಕ್ಷಣಾರ್ಥಿಗಳು ಜನಾಂಗೀಯ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. ಗಾಯಗೊಂಡ ಏಳು ಮಂದಿಯಲ್ಲಿ ಮೂವರನ್ನು ಜೋರ್ಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಉಳಿದ ನಾಲ್ವರನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಳು ಮಣಿಪುರ ಪೊಲೀಸ್ ಪ್ರಶಿಕ್ಷಣಾರ್ಥಿಗಳು, ವಿವಿಧ ಜನಾಂಗಗಳಿಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ. ಶನಿವಾರ ರಾತ್ರಿ ಊಟದ ಸಮಯದಲ್ಲಿ ಕೆಲವು ಸಣ್ಣಪುಟ್ಟ ವಿಷಯಗಳಿಗೆ ಜಗಳ ಶುರುವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇದು ದೈಹಿಕ ಘರ್ಷಣೆಗೆ ಕಾರಣವಾಗಿದೆ. ಇತರ ಈಶಾನ್ಯ ರಾಜ್ಯಗಳ ಪ್ರಶಿಕ್ಷಣಾರ್ಥಿಗಳು ಮಧ್ಯಪ್ರವೇಶಿಸಿ ಕಾದಾಡುತ್ತಿದ್ದ ಎರಡು ಗುಂಪುಗಳನ್ನು ಚದುರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಸ್ಸೋಂ ಮತ್ತು ಮಣಿಪುರದ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಭಾನುವಾರ ಅಕಾಡೆಮಿಗೆ ಭೇಟಿ ನೀಡಿ ಪ್ರಶಿಕ್ಷಣಾರ್ಥಿಗಳಿಗೆ ಎಚ್ಚರಿಕೆ ಕೂಡಾ ನೀಡಿದ್ದಾರೆ. ಅಸ್ಸೋಂ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಈ ಬಗ್ಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ. "ಮಣಿಪುರದ ಯುವ ಪ್ರಶಿಕ್ಷಣಾರ್ಥಿಗಳ ನಡುವೆ ದೆರ್ಗಾಂವ್ ಅಸ್ಸೊಂನ ಪೊಲೀಸ್ ಅಕಾಡೆಮಿಯಲ್ಲಿ ಘರ್ಷಣೆ ನಡೆದಿದೆ. ಈ ಮೂಲಕ ಅವರೆಲ್ಲ ತರಬೇತಿಯ ನಿಯಮಗಳನ್ನು ಮೀರಿದ್ದಾರೆ. ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಿಯಮಗಳನ್ನು ಮೀರದಂತೆ ಅವರಿಗೆಲ್ಲ ಎಚ್ಚರಿಕೆ ನೀಡಲಾಗಿದೆ. ಇನ್ಮುಂದೆ ಇಂತಹ ಅಸಹಜ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ನಮ್ಮ ಅಕಾಡೆಮಿಯಲ್ಲಿ ತರಬೇತಿಯ ಮಾರ್ಗದರ್ಶನಗಳಿಂದ ವಿಮುಖರಾಗದಂತೆ ನೋಡಿಕೊಳ್ಳಲಾಗುವುದು ಮತ್ತು ಕಠಿಣ ತರಬೇತಿ ಕ್ರಮಗಳ ಮೂಲಕ ಸರಿಪಡಿಸಲಾಗುವುದು‘‘ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿಯಲ್ಲಿ ಭೋಜನ ವಿತರಣೆಗೆ ಸಂಬಂಧಿಸಿದಂತೆ ಮಣಿಪುರದ ಪ್ರಶಿಕ್ಷಣಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಇದೀಗ ಈ ವಿಷಯ ಬಗೆಹರಿದಿದೆ. ರೇಂಜ್ ಐಜಿಪಿ ಮತ್ತು ಡಿಐಜಿ ತರಬೇತಿ ಹುಡುಗರ ಬಳಿ ಬೀಡು ಬಿಟ್ಟಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಡಿಜಿಪಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಎಂ.ಪ್ರದೀಪ್ ಸಿಂಗ್ ಕೂಡ ಅಕಾಡೆಮಿಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದು ಮಣಿಪುರ ಪೊಲೀಸ್ ಮೂಲಗಳು ತಿಳಿಸಿವೆ.
ಮಣಿಪುರ ಪೊಲೀಸರಿಗೆ ಅಸ್ಸೋಂ ಪೊಲೀಸ್ ತರಬೇತಿ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುತ್ತದೆ. ಕಳೆದ ತಿಂಗಳು, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಅಸ್ಸೋಂ ಸಹವರ್ತಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಗುವಾಹಟಿಯಲ್ಲಿ ಭೇಟಿ ಮಾಡಿದ್ದರು. ಮತ್ತು ರಾಜ್ಯ ಪೊಲೀಸ್‌ನ ಹೊಸ ನೇಮಕಾತಿಗಳ ತರಬೇತಿ ಕುರಿತು ಚರ್ಚೆ ನಡೆಸಿದ್ದರು.
ಇದನ್ನು ಓದಿ:ಯುಸಿಸಿ ವರದಿ ಅಂಗೀಕರಿಸಿದ ಉತ್ತರಾಖಂಡ ಸರ್ಕಾರ: ಅಧಿವೇಶನದಲ್ಲಿ ಮಸೂದೆಯಾಗಿ ಮಂಡನೆ ಸಾಧ್ಯತೆ