ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಗಾರ್ಡನ್ ರೀಚ್ ಪ್ರದೇಶದ ಹಜಾರಿ ಮೊಲ್ಲಾ ಬಗಾನ್ನಲ್ಲಿ ಭಾನುವಾರ ತಡರಾತ್ರಿ ಭಾರೀ ದುರಂತವೊಂದು ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ನಗರದ ಮೇಯರ್ ಫಿರ್ಹಾದ್, ಕಟ್ಟಡದ ಅವಶೇಷಗಳಡಿ ಸಿಲುಕಿದ ಕೆಲವರನ್ನು ರಕ್ಷಣೆ ಮಾಡಲಾಗಿದೆ. ಇನ್ನಷ್ಟು ಜನರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ. ಬದುಕುಳಿದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ತಿಳಿಸಿದ್ದಾರೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ಸ್ಥಳದಲ್ಲಿ ಆಂಬ್ಯುಲೆನ್ಸ್ಗಳನ್ನು ಬಳಸಿಕೊಳ್ಳಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಸ್‌ಎಸ್‌ಕೆಎಂ ಆಸ್ಪತ್ರೆಯ 5 ವಿಭಾಗಗಳ 9 ವೈದ್ಯರನ್ನು ಗಾರ್ಡನ್ ರೀಚ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿದೆ.
ಪರಿಹಾರ ಘೋಷಣೆ: ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಮೇಯರ್ ಫಿರ್ಹಾದ್ ಹಕೀಂ, ಸಚಿವ ಸುಜಿತ್ ಬಸು ಅವರು ಕಟ್ಟಡದ ಅವಶೇಷಗಳಡಿ ಸಿಲುಕಿರುವವರಲ್ಲಿ ಇಬ್ಬರ ಸಂಪರ್ಕ ಸಿಕ್ಕಿದೆ. ಅವರ ಮಾತುಗಳು ಒಳಗಿನಿಂದ ಕೇಳಿಬಂದಿವೆ. ಆಮ್ಲಜನಕ ಮತ್ತು ಆಹಾರವನ್ನು ಅವರಿದ್ದ ಸ್ಥಳಕ್ಕೆ ಪೂರೈಕೆ ಮಾಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆ ಮಾತನಾಡಲಾಗಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ, ಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಿಎಂ ಮಮತಾ ಕಳವಳ: ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖುದ್ದು ಅವರೇ ಗಾಯಗೊಂಡಿದ್ದರೂ, ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ "ಕಟ್ಟಡ ಕುಸಿತ ದುರಂತದ ತಿಳಿದು ದುಃಖಿತಳಾಗಿದ್ದೇನೆ. ಪೊಲೀಸರು, ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಮೃತ, ಗಾಯಾಳುಗಳಿಗೆ ಪರಿಹಾರ ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಬೆಂಬಲ ನೀಡುತ್ತೇವೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ನಿವಾಸಿಗಳು ಹೇಳೋದೇನು?: "ಕಟ್ಟಡ ಕುಸಿಯುವ ಮೊದಲು ಕಾಂಕ್ರಿಟ್ ತುಂಡುಗಳು ಬಿದ್ದವು. ಆಗ ಭಾರೀ ಸದ್ದು ಕೇಳಿ ಬಂದಿದ್ದು, ಕಟ್ಟಡ ಕುಸಿದು ಬೀಳುತ್ತಿದ್ದಂತೆ ದಟ್ಟ ಧೂಳು ಆವರಿಸಿತ್ತು. ಜನನಿಬಿಡ ಪ್ರದೇಶವಾಗಿರುವ ಕಾರಣ ಸಮೀಪದಲ್ಲಿದ್ದ ಗುಡಿಸಲುಗಳ ಮೇಲೂ ಕಟ್ಟಡದ ಅವಶೇಷಗಳು ಬಿದ್ದಿವೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಯಾರೂ ವಾಸಿಸದಿದ್ದರೂ, ಅದು ಪಕ್ಕದ ಗುಡಿಸಲುಗಳ ಮೇಲೆ ಕುಸಿದಿದೆ. ಅನೇಕ ವ್ಯಕ್ತಿಗಳು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿರಬಹುದು ಎಂಬ ಆತಂಕವಿದೆ" ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ಇದನ್ನೂ ಓದಿ: ಊಟಿಯಲ್ಲಿ ಭೂ ಕುಸಿತ; ಆರು ಮಂದಿ ಮಹಿಳಾ ಕಟ್ಟಡ ಕಾರ್ಮಿಕರು ಸಾವು