ರಾಂಚಿ( ಜಾರ್ಖಂಡ್): ಜಾರಿ ನಿರ್ದೇಶನಾಲಯದಿಂದ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ನೇತೃತ್ವದ ಮೈತ್ರಿಕೂಟದ ನಾಯಕ ಹೇಮಂತ್ ಸೊರೇನ್ ಬಂಧನಕ್ಕೊಳಗಾದ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಬುಧವಾರ ಜೆಎಂಎಂ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಂಪೈ ಸೊರೇನ್ ಅವರನ್ನು ಆಯ್ಕೆ ಮಾಡಿ, ಅವರನ್ನು ನೂತನ ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಕೂಡ ಸ್ವೀಕರಿಸಿದ್ದಾರೆ.
ಈ ನಡುವೆ ಗುರುವಾರ ಸಂಜೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೇನ್, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ಸರ್ಕಾರ ರಚನೆಗೆ ತಡವಾಗಿ ಆಹ್ವಾನ ನೀಡಲಾಗಿದೆ. ಆಪರೇಷನ್ ಕಮಲದ ಭೀತಿ ಹಿನ್ನೆಲೆ ಜೆಎಂಎಂ ನೇತೃತ್ವದ ಮೈತ್ರಿಕೂಟದ ಎಲ್ಲ ಶಾಸಕರನ್ನು ಖಾಸಗಿ ವಿಮಾನದ ಮೂಲಕ ಹೈದರಾಬಾದ್‌ಗೆ ಶಿಫ್ಟ್ ಮಾಡಲಾಗಿದೆ. ಸದ್ಯ 43 ಶಾಸಕರನ್ನು (ಜೆಎಂಎಂ ಮತ್ತು ಕಾಂಗ್ರೆಸ್) ಹೊತ್ತ ಖಾಸಗಿ ವಿಮಾನ ಜಾರ್ಖಂಡ್ನಿಂದ ಹೈದರಾಬಾದ್‌ಗೆ ಆಗಮಿಸಿದ್ದು, ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಷಿ ಎಲ್ಲ ಶಾಸಕರನ್ನು ಸ್ವಾಗತಿಸಿದ್ದಾರೆ.
ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಇದೇ ತಿಂಗಳ 5 ರಂದು ದಿನಾಂಕ ನಿಗದಿಪಡಿಸಲಾಗಿದೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ 43 ಶಾಸಕರ ಬೆಂಬಲವಿರುವುದಾಗಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಈ ಹಿಂದೆ ವಿಡಿಯೋ ಕೂಡ ಬಿಡುಗಡೆ ಮಾಡಿದೆ. ಆದರೆ, ಆಪರೇಷನ್ ಕಲಮದ ಭೀತಿಯಿಂದ ಮೈತ್ರಿಕೂಟದ ಎಲ್ಲ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಹರಸಾಹಕ್ಕೆ ಮುಂದಾಗಿರುವುದು ವಿಪರ್ಯಾಸ ಎಂದು ವಿಶ್ಲೇಷಿಸಲಾಗುತ್ತಿದೆ.
ಜಾರ್ಖಂಡ್ ವಿಧಾನಸಭೆಯಲ್ಲಿ ಬಲಾಬಲ ಪ್ರದರ್ಶನ ನಡೆಯಲಿರುವ ಹಿನ್ನೆಲೆ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಗೆ ಎಚ್ಚರಿಕೆ ಸಹ ನೀಡಲಾಗಿದೆ. ಶಾಸಕರ ಕೈತಪ್ಪದಂತೆ ಹೈದರಾಬಾದ್‌ನಲ್ಲಿ ಶಿಬಿರ ಏರ್ಪಡಿಸಲಾಗಿದೆ. ಈ ಶಾಸಕರ ಜವಾಬ್ದಾರಿಯನ್ನು ತೆಲಂಗಾಣದ ಸಚಿವ ಪೊನ್ನಂ ಪ್ರಭಾಕರ್ ಅವರ ಹೆಗಲಿಗೆ ಹೊರಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಅವರಿಗಾಗಿ ಈಗಾಗಲೇ ಎರಡು ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಕೂಡ ಇದೆ. ಬಹುಮತ ಸಾಬೀತು ಪರೀಕ್ಷೆ ಖಚಿತವಾಗುವವರೆಗೂ ಜಾರ್ಖಂಡ್‌ನ ಎಲ್ಲ ಶಾಸಕರು ಹೈದರಾಬಾದ್‌ನಲ್ಲಿಯೇ ಇರಲಿದ್ದಾರೆ. ವಿಶೇಷ ವಿಮಾನದಲ್ಲಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಾಸಕರನ್ನು ಎರಡು ಎಸಿ ಬಸ್‌ಗಳಲ್ಲಿ ಸಮೀರ್ಪೇಟೆಯ ಲಿಯೋನಿಯಾ ರೆಸಾರ್ಟ್‌ಗೆ ಕರೆದೊಯ್ಯಲಾಯಿತು.
ತೆಲಂಗಾಣದಲ್ಲಿ ಇಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸುರಕ್ಷಿತವಾಗಿರಬಹುದೆಂದು ಭಾವಿಸಿ ಇಲ್ಲಿಗೆ ತೆರಳಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಎಐಸಿಸಿ ಆದೇಶದಂತೆ ತೆಲಂಗಾಣ ಕಾಂಗ್ರೆಸ್ ರಾಜ್ಯ ಉಸ್ತುವಾರಿ ದೀಪದಾಸ್ ಮುನ್ಷಿ, ಸಾರಿಗೆ ಸಚಿವ ಪೊನ್ನಂ ಪ್ರಭಾಕರ್, ಎಐಸಿಸಿ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ರೋಹಿತ್ ಚೌಧರಿ, ಖೈರತಾಬಾದ್ ಡಿಸಿಸಿ ಅಧ್ಯಕ್ಷ ರೋಹಿನ್ ರೆಡ್ಡಿ, ಸಿಕಂದರಾಬಾದ್ ಡಿಸಿಸಿ ಅಧ್ಯಕ್ಷ ಅನಿಲ್ ಕುಮಾರ್ ಯಾದವ್, ಎಲ್‌ಬಿನಗರ ಕಾಂಗ್ರೆಸ್ ಮುಖಂಡರಾದ ಮಾಲ್ರೆಡ್ಡಿ ರಾಮಿರೆಡ್ಡಿ ಮತ್ತು ದರ್ಪಲ್ಲಿ ರಾಜಶೇಖರ್ ರೆಡ್ಡಿ ಈ ಶಾಸಕರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಭೂ ಹಗರಣ: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ 5 ದಿನ ಇಡಿ ವಶಕ್ಕೆ