ಗುವಾಹಟಿ (ಅಸ್ಸೋಂ): ಭಾನುವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತವು ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಹಾನಿಯನ್ನುಂಟು ಮಾಡಿದೆ. ಭಾರೀ ಮಳೆ ಮತ್ತು ಆಲಿಕಲ್ಲು ಸುರಿದಿದ್ದರಿಂದ ರಾಜ್ಯಾದ್ಯಂತ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಭಾನುವಾರ ರಾತ್ರಿ 11 ಗಂಟೆಗೆ ಭಾರೀ ಬಿರುಗಾಳಿಗೆ ಮರಗಳು ಧರೆಗೆ ಉರುಳಿ ಬಿದ್ದಿವೆ. ಕ್ಯಾಚಾರ್ ಜಿಲ್ಲೆಯ ರಾಜ್‌ಘಾಟ್ ಗ್ರಾಮದ ಮಹಿಳೆ ಸಖಿ ಬೇಗಂ ಲಸ್ಕರ್ (30) ಎಂಬುವರು ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಿಡಿಲು ಬಡಿದು ಡೊಂಕಾ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಪಿಂಟು ಚೌಹಾಣ್ (17) ಮೃತಪಟ್ಟಿದ್ದಾರೆ. ಸಂಜೆ 6.30ಕ್ಕೆ ಉದಲಗುರಿ ಜಿಲ್ಲೆಯ ಮಜ್ಬತ್ ಗ್ರಾಮದ ರೂಪರಾಮ್ ಬಸುಮತರಿ (46) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಭಾನುವಾರ ಸಂಜೆ 5 ಗಂಟೆಗೆ ದಕ್ಷಿಣ ಸಲ್ಮಾರಾ-ಮಂಕಚಾರ್ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಿ ದಕ್ಷಿಣ ಸಲ್ಮಾರಾ ಜಿಲ್ಲೆಯ ಮಂಕಚಾರ್ ಗ್ರಾಮದ ಜಹಾಂಗೀರ್ ಮಂಡಲ್ ಅವರ ಪುತ್ರ ಸಮಿನ್ ಮೊಂಡಲ್ (4) ಸಾವನ್ನಪ್ಪಿದ್ದಾರೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಈ ನಾಲ್ಕು ಘಟನೆಗಳ ನಂತರ, ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಗಾಳಿಯ ಪರಿಸ್ಥಿತಿಯ ನಂತರದ ಪರಿಣಾಮಗಳ ಕುರಿತು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಭಾನುವಾರ ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಅಸ್ಸೋಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ ಸರ್ಕಾರವು ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿಯನ್ನು ಒದಗಿಸುತ್ತದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಶರ್ಮಾ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಲ್ಲಿ ಬರಲಿದೆ ಫುಲ್ ಬಾಡಿ ಸ್ಕ್ಯಾನಿಂಗ್, ಅಕ್ರಮ ಸಾಗಾಟ ಪತ್ತೆ ಮತ್ತಷ್ಟು ಸಲೀಸು - Full Body Scanners