ಕಲ್ಲಕುರಿಚಿ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ 35 ಮಂದಿ ಮೃತಪಟ್ಟಿದ್ದಾರೆ. 20 ಜನರು ಅಸ್ವಸ್ಥರಾಗಿದ್ದು ಈ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದಿನಗೂಲಿ ಕಾರ್ಮಿಕರು ಸೇರಿ 60ಕ್ಕೂ ಹೆಚ್ಚಿನ ಜನರು ಮಂಗಳವಾರ ರಾತ್ರಿ ಪ್ಯಾಕೆಟ್ನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ತಲುಪಿದ ನಂತರ ಮದ್ಯ ಸೇವಿಸಿದ ಹೆಚ್ಚಿನವರಲ್ಲಿ ತಲೆ ತಿರುಗುವಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕಣ್ಣುಗಳಲ್ಲಿ ಉರಿಯುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ.
ಇದನ್ನು ಕಂಡ ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರವೇ 10 ಜನರು ಸಾವನ್ನಪ್ಪಿದ್ದಾರೆ. ಇದೇ ದಿನ ಅಂದರೇ ನಿನ್ನೆ ರಾತ್ರಿ ಮತ್ತೆ ಆರು ಜನರು ಅಸುನೀಗಿದ್ದಾರೆ. ಇಂದು ಬೆಳಗ್ಗೆ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. 20 ಜನರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಅಧಿಕಾರಿಗಳ ವರ್ಗಾವಣೆ: ಇಡೀ ತಮಿಳುನಾಡನ್ನು ಬೆಚ್ಚಿ ಬೀಳಿಸಿರುವ ಈ ಘಟನೆ ಬಳಿಕ ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾದವತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎಂಎಸ್ ಪ್ರಶಾಂತ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಆದೇಶ ಮಾಡಿದೆ.
ಜತೆಗೆ ಕಲ್ಲಕುರಿಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ತಾತ್ಕಾಲಿಕವಾಗಿ ವಜಾಗೊಳಿಸಲಾಗಿದೆ ಮತ್ತು ರಜತ್ ಚತುರ್ವೇದಿ ಅವರನ್ನು ಕಲ್ಲಾಕುರಿಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಸಿಬಿಸಿಐಟಿಗೆ ವಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಮಹತ್ವದ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ತಲಾ 10 ಲಕ್ಷ ರೂ. ಪರಿಹಾರ: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಅಸುನೀಗಿದವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.