ಗುವಾಹಟಿ: ಶಾಲೆಯ ಓವರ್‌ಹೆಡ್ ಟ್ಯಾಂಕ್ ಕುಸಿದು ಶಾಲೆಯೊಂದರ ಮೂವರು ವಿದ್ಯಾರ್ಥಿಗಳು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ಶನಿವಾರ ನಡೆದಿದೆ. ಇಟಾನಗರ ಕ್ಯಾಪಿಟಲ್ ಕಾಂಪ್ಲೆಕ್ಸ್ ಆಡಳಿತದ ವ್ಯಾಪ್ತಿಯ ನಹರ್ಲಗುನ್‌ನಲ್ಲಿ ಈ ಘಟನೆ ನಡೆದಿದೆ. ಏಕಮ್ ಬಗಾಂಗ್, ರೇಯ್ ಡೋಲ್ ಮತ್ತು ಮರ್ಶು ದುಬಿ ಮೃತ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
"ಸೀನಿಯರ್ ಅಲ್ಫೋನ್ಸಾ ಶಾಲೆಯಲ್ಲಿ ಈ ದುರಂತ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಓದುತ್ತಿದ್ದರು. ಘಟನೆಯಲ್ಲಿ 8ನೇ ತರಗತಿಯ ಟೋಕೊ ಡೋಲುಮ್ ಮತ್ತು 6ನೇ ತರಗತಿಯ ಲಿಚಾ ಬುಟಮ್ ಎಂಬ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಲೆಯ ಮಾಲೀಕ, ಪ್ರಾಂಶುಪಾಲರು ಮತ್ತು ಶಾಲೆಯ ನಾಲ್ವರು ವಾರ್ಡನ್ ಸೇರಿ ದುರಂತದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಘಟನೆ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಶಾಲಾ ಆವರಣ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಘಟನೆ ಖಂಡಿಸಿ ಸ್ಥಳೀಯರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಯಮವನ್ನು ಕಾಯ್ದುಕೊಳ್ಳುವಂತೆ ಎಲ್ಲರಿಗೂ ತಿಳಿ ಹೇಳಲಾಗಿದೆ. ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿಕೊಡಲಾಗುತ್ತದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
"ನೀರಿನ ಟ್ಯಾಂಕ್ ಹಠಾತ್ ಕುಸಿತಕ್ಕೆ ನಿಖರವಾದ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಹಳೆಯ ಓವರ್‌ಹೆಡ್ ನೀರಿನ ಟ್ಯಾಂಕ್ ಇದಾಗಿದ್ದರಿಂದ ಕುಸಿಯುವ ಮೊದಲು ಅದರ ಸಾಮರ್ಥ್ಯ ಮೀರಿರಬಹುದುಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಸಂತ್ರಸ್ತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಮುಗಿದ ಬಳಿಕ ಎಲ್ಲ ಮೂಲಗಳಿಂದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೇಮಕಾತಿಗೆ ದೈಹಿಕ ಪರೀಕ್ಷೆ, ಮತ್ತೋರ್ವ ಯುವಕ ಸಾವು: ಒಂದೇ ವಾರದಲ್ಲಿ ಮೂರನೇ ಪ್ರಕರಣ! - FOREST GUARD RECRUITMENT