ಚೆನ್ನೈ(ತಮಿಳುನಾಡು) : ಜನವರಿ 30 ರಂದು ಕುಮಾರ್ (ಹೆಸರು ಬದಲಾಯಿಸಲಾಗಿದೆ) ಅವರು ಚೆನ್ನೈನ ನೀಲನ್‌ಕರೈ, ಮಹಿಳಾ ಪೊಲೀಸ್ ಠಾಣೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ. ಅದರಲ್ಲಿ ತಮ್ಮ ಮಗಳು ಸೇರಿದಂತೆ 7 ರಿಂದ 10 ವರ್ಷದೊಳಗಿನ ಮೂವರು ಬಾಲಕಿಯರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಹೀಗಿದೆ: ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ತಮಿಳುನಾಡು ಪೊಲೀಸರು, ‘‘ಕಳೆದ ತಿಂಗಳ 30ರಂದು ತಿರುವನ್ಮಿಯೂರು ಪ್ರದೇಶದಲ್ಲಿ ಬಾಲಕಿಯರು ಆಟವಾಡುತ್ತಿದ್ದರು. ಆ ವೇಳೆ, ನಾಲ್ಕನೇ ತರಗತಿಯ ಬಾಲಕ ನೀವು ನನ್ನೊಂದಿಗೆ ಬಂದರೆ ನಿಮಗೆ ಚಾಕೊಲೇಟ್ಗಳನ್ನು ನೀಡುವುದಾಗಿ ಹೇಳಿ 7 ರಿಂದ 10 ವರ್ಷದ ಮೂವರು ಬಾಲಕಿಯರನ್ನು ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ಕರೆದೊಯ್ದಿದ್ದಾನೆ.
ಆಗ ಅಲ್ಲಿಗೆ ಬಂದ ನಿಗೂಢ ವ್ಯಕ್ತಿಯೊಬ್ಬ ಬಾಲಕಿಯರಿಗೆ ಚಾಕೊಲೇಟ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ ಮನೆಗೆ ಕಳುಹಿಸಿದ್ದಾನೆ. ಇದರಿಂದ ಹುಡುಗಿಯರು ಹೆದರಿ ಮನೆಯಲ್ಲಿ ಏನನ್ನೂ ಹೇಳಿಲ್ಲ. ಇದಾದ ಬಳಿಕ ಬಾಲಕಿಯೊಬ್ಬಳು ಮನೆಯಲ್ಲಿ ಸುಸ್ತಾಗಿದ್ದಾಳೆ. ಈ ವೇಳೆ ಪೋಷಕರು ವಿಚಾರಿಸಿದಾಗ ನಡೆದ ಸಂಗತಿಯನ್ನು ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸರು ಹುಡುಗಿಯರನ್ನು ವಿಚಾರಣೆಗೆ ಒಳಪಡಿಸಿ, ಆ ಬಳಿಕ ಅವರನ್ನು ಕರೆದುಕೊಂಡು ಶಾಲೆಗೆ ತೆರಳಿ ಈ ವಿಚಾರದ ಬಗ್ಗೆ ನಾಲ್ಕನೇ ತರಗತಿಯ ಹುಡುಗನೊಬ್ಬನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನಿಗೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಪ್ರಕರಣ ಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಕಂಡು ಹಿಡಿಯಲು ಮತ್ತು ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕಂಡು ಹಿಡಿಯಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
3 ವಿಶೇಷ ತಂಡ ರಚನೆ: ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಹುಡುಕುತ್ತಿರುವ ಪೊಲೀಸರಿಗೆ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿ ಪರಿಣಮಿಸಿದೆ. ಈ ನಡುವೆ ಬಾಲಕಿಯರ ಹೇಳಿಕೆ ಆಧರಿಸಿ ನೀಲಂಕರೈನ ಮಹಿಳಾ ಪೊಲೀಸರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕೆ ಬಲೆ ಬೀಸಿದ್ದಾರೆ. ಅಷ್ಟೇ ಅಲ್ಲ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪೋಕ್ಸೊ ಕಾಯ್ದೆಯಡಿ 3 ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ನಡುವೆ ಆ ಪ್ರದೇಶದಲ್ಲಿ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಕೇರಳದಲ್ಲಿ ಹೋಮ್ ಸ್ಟೇ ಮಾಲೀಕ ಸೆರೆ