ಮುಂಬೈ (ಮಹಾರಾಷ್ಟ್ರ): ದಕ್ಷಿಣ ಕೊರಿಯಾದ ಪ್ರಖ್ಯಾತ ಬಿಟಿಎಸ್ ಪಾಪ್ ತಾರೆಯರನ್ನು ಭೇಟಿಯಾಗುವ ಉದ್ದೇಶದಿಂದ ಪ್ರಯಾಣಕ್ಕಾಗಿ ಮೂವರು ಬಾಲಕಿಯರು ಸ್ವಯಂ ಅಪಹರಣದ ನಾಟಕವಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. 11 ವರ್ಷ ಹಾಗೂ 13 ವರ್ಷದ ಇಬ್ಬರು ಸೇರಿ ಒಟ್ಟು ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಪೋಷಕರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕೊರಿಯಾದ ಕೆ-ಪಾಪ್ ಬ್ಯಾಂಡ್ ತಾರೆಯರೆಂದರೆ ತಮಗೆ ಬಲು ಇಷ್ಟ, ಇದೇ ಕಾರಣಕ್ಕೆ ನಾವು ದಕ್ಷಿಣ ಕೊರಿಯಾಗೆ ತೆರಳಲು ಯೋಜಿಸಿದ್ದೆವು. ಇದಕ್ಕಾಗಿ ಪುಣೆಗೆ ಹೋಗಿ ಅಲ್ಲಿ ಹಣ ಹೊಂದಿಸಲು ನಿರ್ಧರಿಸಿದ್ದೆವು ಎಂದು ಧರಶಿವ ಜಿಲ್ಲೆಯ ಬಾಲಕಿಯರು ತಿಳಿಸಿದ್ದಾರೆ. ಸದ್ಯ ಇದೀಗ ಪೊಲೀಸರ ವಶದಲ್ಲಿರುವ ಇವರನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಪ್ರಕರಣ ಹಿನ್ನೆಲೆ: ಡಿಸೆಂಬರ್ 27ರಂದು ಧರಶಿವ ಪೊಲೀಸರ ಸಹಾಯವಾಣಿಗೆ ಕರೆಯೊಂದು ಬಂದಿತ್ತು. ಈ ಕರೆಯಲ್ಲಿ ಮಾತನಾಡಿದ ಮೂವರು ಬಾಲಕಿಯರು ಒಮೆರ್ಗಾ ತಾಲೂಕಿನಿಂದ ಶಾಲಾ ವಾಹನದಲ್ಲಿ ತಮ್ಮನ್ನು ಬಲವಂತವಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಿದ್ದರು.
ದೂರು ಸ್ವೀಕರಿಸುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ಕರೆ ಮಾಡಿದ ಫೋನ್ ನಂಬರ್ ಬಗ್ಗೆ ತನಿಖೆ ನಡೆಸಿದರು. ಈ ವೇಳೆ ಮಹಿಳೆಯೊಬ್ಬರಿಗೆ ಸೇರಿದ ನಂಬರ್ ಇದಾಗಿದ್ದು, ಈಕೆ ಒಮೆರ್ಗಾದಿಂದ ಪುಣೆಗೆ ರಾಜ್ಯ ಸಾರಿಗೆ ವಾಹನದಲ್ಲಿ ಪ್ರಯಾಣಿಸುತ್ತಿರುವುದು ತಿಳಿದು ಬಂದಿತ್ತು. ಪೊಲೀಸರು ಆ ಬಸ್ ಅನ್ನು ಟ್ರ್ಯಾಕ್ ಮಾಡಿದಾಗ ಅದು ಸೋಲಾಪುರ ಜಿಲ್ಲೆಯ ಮೊಹೊಲ ಪ್ರದೇಶದಲ್ಲಿ ಸಾಗಿರುವುದು ಕಂಡು ಬಂದಿತ್ತು.
ಈ ವೇಳೆ ಮಹಿಳೆಯನ್ನು ಸಂಪರ್ಕಿಸಿದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮಹಿಳೆಯ ಸಹಾಯದಿಂದ ಪೊಲೀಸರು ಮೂವರು ಬಾಲಕಿಯರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆತಂದು, ಪೋಷಕರಿಗೆ ವಿಷಯ ತಲುಪಿಸಿದ್ದಾರೆ. ವಿಚಾರಣೆ ವೇಳೆ ಮಾತನಾಡಿದ ಅವರು, ಪುಣೆಗೆ ತೆರಳುತ್ತಿದ್ದೆವು. ಅಲ್ಲಿ ದುಡಿದು, ಹಣ ಸಂಪಾದಿಸಿ ಅದರಿಂದ ದಕ್ಷಿಣ ಕೊರಿಯಾಗೆ ತೆರಳಿ ಪಾಪ್ ತಾರೆಯನ್ನು ಭೇಟಿಯಾಗುವ ಉದ್ದೇಶದಿಂದ ಈ ರೀತಿ ಮಾಡಿದ್ದಾಗಿ ಬಾಲಕಿಯರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಏಳು ಸುತ್ತಿನ ಭದ್ರತೆ; ಉತ್ತರ ಪ್ರದೇಶ ಸರ್ಕಾರ