ನವದೆಹಲಿ: 18ನೇ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಕೂಟದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ. ಮತದಾರ ಪ್ರಭುಗಳು ನರೇಂದ್ರ ಮೋದಿ ಅವರ ವರ್ಚಸ್ಸಿನ ನಡುವೆಯೂ ಕಮಲ ಪಕ್ಷವನ್ನು ಏಕಾಂಗಿಯಾಗಿ ಬೆಂಬಲಿಸಿಲ್ಲ.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಈ ಬಾರಿಯ ಸಂಸತ್ತಿಗೆ 280 ಮಂದಿ ಹೊಸ ಸಂಸದರು ಆಯ್ಕೆಯಾಗಿರುವುದು ವಿಶೇಷವಾಗಿದೆ. ಇದು ಕಳೆದ ಬಾರಿಗಿಂತಲೂ ಹೆಚ್ಚಾಗಿದೆ. ಕಳೆದ ಬಾರಿ 267 ಮಂದಿ ಮೊದಲ ಚುನಾವಣೆಯಲ್ಲೇ ಗೆದ್ದಿದ್ದರು.
ಉತ್ತರಪ್ರದೇಶದಲ್ಲಿ ಹೆಚ್ಚು: ಉತ್ತಪ್ರದೇಶ ರಾಜ್ಯದಿಂದ ಅತಿಹೆಚ್ಚು ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ಅಂದರೆ, ಇಲ್ಲಿ 80 ಲೋಕಸಭಾ ಸೀಟುಗಳ ಪೈಕಿ 45 ಮಂದಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಹೊಸ ಸಂಸದರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಮತ್ತು ಹೈಕೋರ್ಟ್ ಮಾಜಿ ನ್ಯಾಯಾಧೀಶರು ಕೂಡ ಇದ್ದಾರೆ.
ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಧಾರಾವಾಹಿಯಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದ ಅರುಣ್ ಗೋವಿಲ್ ಅವರು ಜಯ ಸಾಧಿಸಿದ್ದಾರೆ. ರಾಹುಲ್ ಗಾಂಧಿ ಬದಲಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಅವರು ಗೆಲುವು ಪಡೆದಿದ್ದಾರೆ. ದಲಿತ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಆಜಾದ್ ಆಜಾದ್ ಅವರು ನಗೀನಾ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಡಿಮೆ ಸೀಟು ಬಂದಿದ್ದರೂ 33 ಮಂದಿ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಎನ್ಸಿಪಿಯಿಂದ ದಿಂಡೋರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಾಲಾ ಶಿಕ್ಷಕ ಭಾಸ್ಕರ್ ಭಾಗೆ ಅವರು ಬಿಜೆಪಿ ನಾಯಕಿ ಭಾರತಿ ಪವಾರ್ ಅವರನ್ನು ಸೋಲಿಸಿದ್ದಾರೆ.
ಮುಂಬೈ ಉತ್ತರ ಕ್ಷೇತ್ರದಿಂದ ಚುನಾಯಿತರಾದ ಬಿಜೆಪಿಯ ಪಿಯೂಷ್ ಗೋಯಲ್, ಅಮರಾವತಿ ಕ್ಷೇತ್ರದಲ್ಲಿ ಹಿಂದು ಫೈರ್ಬ್ರ್ಯಾಂಡ್ ಬಿಜೆಪಿಯ ನವನೀತ್ ರಾಣಾ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಬಲ್ವಂತ್ ವಾಂಖೆಡೆ, ಅಕೋಲಾದಲ್ಲಿ ಬಿಜೆಪಿಯ ಅನೂಪ್ ಧೋತ್ರೆ, ಸಾಂಗ್ಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸ್ವತಂತ್ರ ಅಭ್ಯರ್ಥಿ ವಿಶಾಲ್ ಪಾಟೀಲ್ ಅವರು ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.
ಆಯ್ಕೆಯಾದ ಮಾಜಿ ಸಿಎಂಗಳು: ದೇಶದಲ್ಲಿ 8 ಮಂದಿ ಮಾಜಿ ಸಿಎಂಗಳು ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗ ಕ್ಷೇತ್ರದ ನಾರಾಯಣ ರಾಣೆ, ಉತ್ತರಾಖಂಡದ ಹರಿದ್ವಾರ ಲೋಕಸಭಾ ಕ್ಷೇತ್ರದಿಂದ ತ್ರಿವೇಂದ್ರ ಸಿಂಗ್ ರಾವತ್, ಹರ್ಯಾಣದ ಕರ್ನಾಲ್ನಿಂದ ಮನೋಹರ್ ಲಾಲ್, ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ಬಿಪ್ಲಬ್ ಕುಮಾರ್ ದೇಬ್, ಬಿಹಾರದ ಗಯಾದಿಂದ ಜಿತನ್ ರಾಮ್ ಮಾಂಝಿ, ಕರ್ನಾಟಕದ ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್, ಪಂಜಾಬ್ನ ಜಲಂಧರ್ನಿಂದ ಚರಂಜಿತ್ ಸಿಂಗ್ ಚನ್ನಿ ಲೋಕಸಭೆಗೆ ಮೊದಲ ಸಲ ಪ್ರವೇಶ ಪಡೆದಿದ್ದಾರೆ.
ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ ನಟ ಸುರೇಶ್ ಗೋಪಿ ಅವರು ತ್ರಿಶೂರ್ನಿಂದ ಆಯ್ಕೆಯಾದರೆ, ಬಾಲಿವುಡ್ ನಟಿ ಕಂಗನಾ ರಣಾವತ್ ಹಿಮಾಲಚಪ್ರದೇಶದ ಮಂಡಿ ಕ್ಷೇತ್ರದಿಂದ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಅನಿಲ್ ದೇಸಾಯಿ, ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಅವರು ಕೂಡ ಲೋಕಸಭೆಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ.
ರಾಜಮನೆತನಗಳ ಅಭ್ಯರ್ಥಿಗಳು: ಹಿಂದಿನ ರಾಜಮನೆತನದ ಸದಸ್ಯರಾದ ಛತ್ರಪತಿ ಶಾಹು (ಕೊಲ್ಹಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು), ಮತ್ತು ಕೃತಿ ದೇವಿ ದೆಬ್ಬರ್ಮನ್ (ತ್ರಿಪುರಾ ಪೂರ್ವ) ಅವರು ಕೂಡ ಆಯ್ಕೆಯಾಗಿದ್ದಾರೆ.
ಇನ್ನು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸವಾಲು ಸ್ವೀಕರಿಸಿ ರಾಜಕೀಯಕ್ಕೆ ಧುಮುಕಿರುವ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ತಾಲ್ಮುಕ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದಾರೆ.
ಇದನ್ನೂ ಓದಿ: ಲೋಕ ಕದನದಲ್ಲಿ ಹಿನ್ನಡೆ: ಸರ್ಕಾರದ ಮಟ್ಟದಲ್ಲಿ ಬದಲಾವಣೆಗೆ ಸಿಎಂ ಯೋಗಿ ಚಿಂತನೆ - cm yogi meetings