ಸಂಬಲ್( ಉತ್ತರಪ್ರದೇಶ): ಉತ್ತರಪ್ರದೇಶದ ಜುನ್ವಾಯಿ ಪ್ರದೇಶದ ಹರಗೋವಿಂದಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಮಣ್ಣು ಅಗೆಯಲಾಗುತ್ತಿತ್ತು. ಈ ಸಮಯದಲ್ಲಿ 18 ನೇ ಶತಮಾನದ ಮೊಘಲರ ಕಾಲಕ್ಕೆ ಸೇರಿದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಈ ಸ್ಥಳದಲ್ಲಿ ಪತ್ತೆಯಾಗಿವೆ.
ಮೊಘಲ್ ಕಾಲದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಹೂಜಿಯಲ್ಲಿ ತುಂಬಿಸಿಡಲಾಗಿತ್ತು. ಅವುಗಳ ತೂಕ ಒಂದು ಕಿಲೋಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತದೆ. ಹೀಗೆ ಸಿಕ್ಕ ನಾಣ್ಯಗಳನ್ನು ತೆಗೆದುಕೊಂಡು ಗುತ್ತಿಗೆದಾರ ಕಾಲ್ಕಿತ್ತಿದ್ದಾರೆ ಎಂಬ ವಿಷಯ ಹೊರ ಬಿದ್ದಿದೆ. ಕೆಲವು ನಾಣ್ಯಗಳು ಗ್ರಾಮಸ್ಥರ ಕೈಗೆ ಸಹ ಸಿಕ್ಕಿವೆ. ಈ ಮಾಹಿತಿ ಪಡೆದ ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್ ಮತ್ತು ಉಪ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಈ ನಡುವೆ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದರು. ಗ್ರಾಮಸ್ಥರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?: ಮಂಗಳವಾರ ಹರಗೋವಿಂದಪುರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮಣ್ಣು ಅಗೆಯಲಾಗುತ್ತಿತ್ತು. ಈ ಕಾಮಗಾರಿಯನ್ನು ಗ್ರಾಮದ ಮುಖಂಡ ಕಮಲೇಶ್ ನಿರ್ವಹಿಸುತ್ತಿದ್ದರು. ಲಾಹ್ರಾ ನಾಗ್ಲಾ ಶ್ಯಾಮ್ ನಿವಾಸಿ ಮಣಿರಾಮ್ ಸಿಂಗ್ ಅವರ ಜಮೀನಿನಿಂದ ರಸ್ತೆಗೆ ಮಣ್ಣು ಅಗೆದು ತರಲಾಗುತ್ತಿತ್ತು. ಹೀಗೆ ಮಣ್ಣು ಅಗೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಮಣ್ಣಿನ ಮಡಕೆಯೊಂದು ಸಿಕ್ಕಿತು. ಇದು 18 ನೇ ಶತಮಾನದ ಮೊಘಲ್ ಯುಗದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳಿಂದ ತುಂಬಿತ್ತು. ಗುತ್ತಿಗೆದಾರರು ಮತ್ತು ಕಾರ್ಮಿಕರು ನಾಣ್ಯಗಳನ್ನು ಸಂಗ್ರಹಿಸಲು ಮುಗಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗೆ ಮಡಕೆಯಲ್ಲಿ ಸಿಕ್ಕ ನಾಣ್ಯಗಳನ್ನು ಎತ್ತಿಕೊಂಡು ಕೆಲವರು ಓಡಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗದ್ದೆಯಲ್ಲಿ ನಾಣ್ಯಗಳು ಪತ್ತೆಯಾದ ಸುದ್ದಿ ತಿಳಿದ ಗ್ರಾಮಸ್ಥರು ಮಣ್ಣು ಅಗೆಯುತ್ತಿದ್ದ ಸ್ಥಳಕ್ಕೆ ಗುಂಪು ಗುಂಪಾಗಿ ಧಾವಿಸಿದ್ದರು. ಈ ವೇಳೆ ಕೆಲವು ನಾಣ್ಯಗಳು ಗ್ರಾಮಸ್ಥರಿಗೂ ಸಿಕ್ಕಿದ್ದವು.
ಹೀಗೆ ಸಿಕ್ಕು ಒಟ್ಟು ನಾಣ್ಯಗಳ ತೂಕ 1 ಕೆಜಿ 300 ಗ್ರಾಂ ಇರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮದ ಕೆಲವರು ಮೊಘಲರ ಕಾಲದ ನಾಣ್ಯಗಳು ಸಿಕ್ಕಿರುವ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದಾರೆ. ಎಸ್‌ಡಿಎಂ ರಮೇಶ್ ಬಾಬು ಮತ್ತು ಸಿಒ ಅಲೋಕ್ ಕುಮಾರ್ ಸಿದ್ದು ಸ್ಥಳಕ್ಕೆ ಬಂದು ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ಇಬ್ಬರೂ ಅಧಿಕಾರಿಗಳು ಗ್ರಾಮಸ್ಥರಿಂದ ನಾಣ್ಯಗಳು ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು. ಈ ನಡುವೆ ನಾಣ್ಯಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಗುತ್ತಿಗೆದಾರನ ವಿರುದ್ಧ ಗ್ರಾಮದ ಮುಖಂಡ ಕಮಲೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಕುಮಾರ್, ಈ ಬಗ್ಗೆ ದೂರು ಸ್ವೀಕರಿಸಿದ್ದು ತನಿಖೆ ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಜ್ಞಾನವಾಪಿ ಮಸೀದಿ ವಿವಾದ: ಎಎಸ್ಐ ಸರ್ವೇ ವರದಿ ಬಹಿರಂಗಕ್ಕೆ ವಾರಣಾಸಿ ಕೋರ್ಟ್ ಸೂಚನೆ