ಹತ್ರಾಸ್: ಶಾಲೆಗೆ ಯಶಸ್ಸು ಬರಬೇಕು, ಖ್ಯಾತಿ ಎಲ್ಲೆಡೆ ಹಬ್ಬಬೇಕು ಎಂಬ ಉದ್ದೇಶದಿಂದ 2ನೇ ತರಗತಿಯ 11 ವರ್ಷದ ಬಾಲಕನನ್ನು ದಾರುಣವಾಗಿ ಕೊಲೆಗೈದು, ಮಾನವ ಬಲಿ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದೆ.
ಹತ್ರಾಸ್ನ ಸಹಪೌ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ಗವನ್ ಗ್ರಾಮದ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕನ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಶಾಲೆಗೆ ಖ್ಯಾತಿ ಮತ್ತು ಯಶಸ್ಸು ತರಬೇಕೆಂಬ ಉದ್ದೇಶದಿಂದ ತಂತ್ರ ವಿದ್ಯೆ ಬಳಸಿ, ಬಾಲಕನನ್ನು ಬಲಿ ಕೊಟ್ಟಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಡಿಎಲ್ ಪಬ್ಲಿಕ್ ಶಾಲೆಯ 2ನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್ ಸಾವನ್ನಪ್ಪಿದ ಬಾಲಕ. ಈತನನ್ನು ಶಾಲೆಯ ಹಾಸ್ಟೆಲ್ನಲ್ಲಿ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಮೃತದೇಹ ಶಾಲೆಯ ವಾಹನದ ಒಳಗೆ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತಾರ್ಥ್ ಟುರ್ಸೆನ್ ಗ್ರಾಮದ ಬಾಲಕನಾಗಿದ್ದು, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಇದೀಗ ಮೃತದೇಹ ಪತ್ತೆಯಾಗುತ್ತಿದ್ದಂತೆ ಗ್ರಾಮದಲ್ಲಿ ಆತಂಕ, ಆಕ್ರೋಶ ಭುಗಿಲೆದ್ದಿದೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಐವರನ್ನು ಬಂಧಿಸಿದ್ದಾರೆ. ಶಾಲೆಯ ಮ್ಯಾನೇಜರ್ ದಿನೇಶ್ ಭಘೇಲ್ ಅಲಿಯಾಸ್ ಭಗತ್, ರಾಮ್ಪ್ರಕಾಶ್ ಸೋಲಂಕಿ, ಶಾಲೆಯ ಮ್ಯಾನೇಜರ್‌ನ ತಂದೆ ಜಶೋಧನ್ ಸಿಂಗ್, ಲಕ್ಷಣ್ ಸಿಂಗ್ ಮತ್ತು ವೀರ್ಪಲ್ ಸಿಂಗ್ ಅಲಿಯಾಸ್ ವೀರು ಬಂಧಿತರು.
ಬಾಲಕ ಕಣ್ಮರೆಯಾಗಿರುವ ಸಂಬಂಧ ಆತನ ತಂದೆ ಕೃಷ್ಣ ಕುಮಾರ್ ಸೆಪ್ಟಂಬರ್ 23ರಂದು ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಹುಡುಕಾಟ ನಡೆಸಿದಾಗ ಬಾಲಕನನ್ನು ಬಲಿ ನೀಡುವ ಉದ್ದೇಶದಿಂದ ಹತ್ಯೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿ ಹಿಮಾಂಶು ಮಥುರ್, "ಶಾಲೆಯ ಮ್ಯಾನೇಜರ್ ದಿನೇಶ್ ಬಘೇಲ್ ಅವರ ತಂದೆ ಜಶೋಧನ್ ಸಿಂಗ್ ಈ ದುಷ್ಕೃತ್ಯದ ಮಾಸ್ಟರ್ ಮೈಂಡ್" ಎಂದು ಹೇಳಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಕೊಯಮತ್ತೂರಿನಿಂದ ಕೇರಳಕ್ಕೆ ಬಂತು ಬಿರಿಯಾನಿ; ತೃತೀಯಲಿಂಗಿಗಳ ಅಡುಗೆ ಸೃಷ್ಟಿಸಿದ ಸಂಚಲನ