ಗುವಾಹಟಿ: ಮಣಿಪುರದ ಸಂಘರ್ಷ ಪೀಡಿತ ಜಿರೀಬಾಮ್ ಜಿಲ್ಲೆಯ ಜಕುರಾಧೋರ್‌ನಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 11 ಶಂಕಿತ ಉಗ್ರರು ಹತರಾಗಿದ್ದು, ಇಬ್ಬರು ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಯೋಧರು ಗಾಯಗೊಂಡ ಘಟನೆ ನಡೆದಿದೆ.
''ಜಿರೀಬಾಮ್ ಜಕುರಾಧೋ ಪ್ರದೇಶದಲ್ಲಿ ಮೈತೆಯಿ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳಿಗೆ ಶಂಕಿತ ಉಗ್ರರು ಇದ್ದಕ್ಕಿದ್ದಂತೆ ಬೆಂಕಿ ಹಚ್ಚತೊಡಗಿದ್ದರು. ಈ ವೇಳೆ ಇದನ್ನು ತಡೆಯಲು ಬಂದ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದರು. ಪ್ರತಿಯಾಗಿ ಸಿಆರ್‌ಪಿಎಫ್ ಯೋಧರು ಕೂಡ ಗುಂಡು ಹಾರಿಸಿದ್ದಾರೆ. ಪರಿಣಾಮ 11 ಮಂದಿ ಶಂಕಿತ ಉಗ್ರರು ಹತರಾಗಿದ್ದು, ಗುಂಡಿನ ಕಾಳಗದಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಸಹ ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಾರ್ಯಾಚರಣೆ ನಡೆದಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
11 suspected militants killed in an encounter with CRPF in Jiribam area of Manipur. A CRPF personnel is also critically injured in the encounter: Sources pic.twitter.com/mDoJu2VA3y
— ANI (@ANI) November 11, 2024
ಈ ಪ್ರದೇಶದ ಐವರು ನಾಗರಿಕರು ನಾಪತ್ತೆಯಾಗಿದ್ದು, ನಾಪತ್ತೆಯಾದ ನಾಗರಿಕರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಮೃತರ ಶವಗಳನ್ನು ಬೊರೊಬೆಕ್ರಾ ಪೊಲೀಸ್ ಠಾಣೆಗೆ ತರಲಾಗಿದೆ. ಗಾಯಗೊಂಡ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸಹ ಪೊಲೀಸರು ತಿಳಿಸಿದ್ದಾರೆ.
ಗುರುವಾರ ತಡ ರಾತ್ರಿ ಮಣಿಪುರದ ಸಂಘರ್ಷ ಪೀಡಿತ ಜಿರೀಬಾಮ್ ಜಿಲ್ಲೆಯ ಝೈರಾವನ್ ಎಂಬ ಗ್ರಾಮಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳು, ಮಹಿಳೆಯೊಬ್ಬರಿಗೆ ಗುಂಡಿಕ್ಕಿ, ನಂತರ ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು. ದಾಳಿ ಬಳಿಕ ಹಲವು ಮನೆಗಳಿಗೆ ಬೆಂಕಿಯನ್ನೂ ಹಚ್ಚಿದ್ದರು ಎಂದು ವರದಿಯಾಗಿತ್ತು. ಅಂದಿನಿಂದ ಜಿರೀಬಾಮ್‌ನಲ್ಲಿ ಉದ್ವಿಗ್ನತೆ ಹೆಚ್ಚಿದೆ.
17 ತಿಂಗಳಲ್ಲಿ 230 ಜನ ಬಲಿ; ಕಳೆದ 17 ತಿಂಗಳ ಅವಧಿಯಲ್ಲಿ ಮೈತೆಯಿ ಮತ್ತು ಕುಕ್ಕಿ ಸಮುದಾಯದಿಂದ 230 ಮಂದಿ ಸಾವನ್ನಪ್ಪಿದ್ದಾರೆ. 2023ರ ಮೇ 3 ರಂದು ಈ ಸಮುದಾಯಗಳ ನಡುವೆ ಗಲಾಟೆ ಶುರುವಾಗಿ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗಿನಿಂದ ಒಂದಿಲ್ಲೊಂದು ಗಲಭೆ, ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಈ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈವರೆಗೆ ಸುಮಾರು 65 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲೇ ಅವರು ಜೀವನ ಕಳೆಯುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆ ಅಲ್ಲೇ ಬೀಡುಬಿಟ್ಟಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆಗೈದ ಭದ್ರತಾ ಪಡೆ