ಇಂದು ಸಹಾಯ ಮಾಡಿದ ಸಿದ್ದರಾಮಯ್ಯರನ್ನ ಮುಂದಿನ ಬಾರಿಯೂ ಕಾಪಾಡುತ್ತೇವೆ: ಗ್ಯಾರಂಟಿ ಖುಷಿಯಲ್ಲಿ ಬೆಳಗಾವಿ ಮಹಿಳೆಯರು

🎬 Watch Now: Feature Video

thumbnail

By

Published : Jun 2, 2023, 7:34 PM IST

ಬೆಳಗಾವಿ: ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಮಹಿಳಾ ಮಣಿಗಳು ಹರ್ಷ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧೆಡೆಯ ಮಹಿಳೆಯರು ಈಟಿವಿ ಭಾರತ ಜೊತೆ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದರು.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಾಗವೇಣಿ ಮೂಲಿಮನಿ ಎಂಬುವವರು ಮಾತನಾಡಿ, "ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನವರು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾ‌ನ ಮಾಡುತ್ತಿರುವುದು ಖುಷಿ ತಂದಿದೆ ಮತ್ತು ಈ ಸಂದರ್ಭದಲ್ಲಿ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಉಚಿತ ಬಸ್ ಪಾಸ್​ನಿಂದಾಗಿ ಉದ್ಯೋಗಸ್ಥ ಮಹಿಳೆಯರಿಗೆ ತುಂಬಾ ಅನುಕೂಲ ಆಗುತ್ತದೆ. ಅಲ್ಲದೇ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ. ಇನ್ನುಳಿದ ಮೂರು ಯೋಜನೆಗಳಿಂದಲೂ ಎಲ್ಲರಿಗೂ ಬಹಳಷ್ಟು ಸಹಾಯವಾಗುತ್ತದೆ" ಎಂದರು.

ಬಳಿಕ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ಮಹಾದೇವಿ ಜೋಡಂಗಿ ಮಾತನಾಡಿ, "ಸರ್ಕಾರ ಯೋಜನೆಗಳಿಂದ ಸಹಾಯ ಮಾಡುತ್ತಿರುವುದು ನಮಗೆ ಬಹಳಷ್ಟು ಆನಂದವಾಗಿದೆ. ಬಡವರಿಗೆ ಸರ್ಕಾರ ಸಹಾಯ ಮಾಡಿದರೆ ಮಾತ್ರ ಮುಂದೆ ಬರಲು‌ ಸಾಧ್ಯವಾಗುತ್ತದೆ. ಹುಬ್ಬಳ್ಳಿ, ಪಂಢರಪುರ, ನರೇಂದ್ರ, ಬೈಲಹೊಂಗಲ, ಬೆಳಗಾವಿಗೆ ಇನ್ಮೇಲೆ ಉಚಿತವಾಗಿ ಬಸ್​ನಲ್ಲೇ ಹೋಗುತ್ತೇವೆ. ಇಷ್ಟೆಲ್ಲ ಸಹಾಯ ಮಾಡಿದ ಮುಖ್ಯಮಂತ್ರಿಗಳಿಗೆ ನಾವು ಆಶೀರ್ವಾದ ಮಾಡುತ್ತೇವೆ" ಎಂದು ಹೇಳಿದರು.

ಗೋಕಾಕ್ ತಾಲೂಕಿನ ಕುಂದರಗಿ ಗ್ರಾಮದ ಮಾಬುಬಿ ದೇಸಾಯಿ ಮಾತನಾಡಿ, "ನಾವು ಬಡವರಿದ್ದು, ಪ್ರತಿದಿನ ದುಡಿದು ತಿನ್ನುತ್ತೇವೆ. 200 ರೂ. ಕೂಲಿ ಹಣದಲ್ಲಿ ಜೀವನ ಮಾಡೋಕೆ ಆಗುವುದಿಲ್ಲ. ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ಈಗ ನಮಗೆ ಸಹಾಯ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ನಾವು ಮುಂದಿನ ಬಾರಿಯೂ ಕಾಪಾಡುತ್ತೇವೆ" ಎಂದರು.

ನಂತರ ಕರಗುಪ್ಪಿ ಗ್ರಾಮದ ಸಮಿತ್ರಾ ನಾಯಿಕ ಮಾತನಾಡಿ, "ಉಚಿತ ಬಸ್ ಸೇವೆಯಿಂದ ನಮಗೆ ಒಳ್ಳೆಯದಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ವಂದನೆ ಸಲ್ಲಿಸುತ್ತೇವೆ. ಇನ್ನು ಬಸ್ ಉಚಿತವಿದೆ ಎಂದು ಎಷ್ಟು ಬೇಕೋ ಅಷ್ಟೇ ಉಪಯೋಗ ಮಾಡಿಕೊಳ್ಳುತ್ತೇವೆ. ಪ್ರತಿದಿನವೂ ನಮಗೆ ಹೋಗಲು ಆಗುವುದಿಲ್ಲ. ಬಹಳಷ್ಟು ಕಲಿತ ಯುವಕರು ಉದ್ಯೋಗ ಇಲ್ಲದೇ ಮನೆಯಲ್ಲಿದ್ದಾರೆ. ಅಂತವರಿಗೆ ಸರ್ಕಾರ ಹೆಚ್ಚಿನ ಸಹಾಯ ಮಾಡಬೇಕೆಂದು‌ ಕೇಳಿಕೊಂಡರು.

ಒಟ್ಟಾರೆ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮೊದಲ ಹೆಜ್ಜೆ ಇಟ್ಟಿದ್ದು, ಎಲ್ಲೆಡೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕಂಡು‌ ಬಂದಿದೆ.

ಇದನ್ನೂ ಓದಿ: ನಾಡಿನ ಎಲ್ಲಾ ಜನತೆಗೂ ಜಾತಿ, ಮತ, ಧರ್ಮ ಭೇದವಿಲ್ಲದೆ ಉಚಿತ 200 ಯೂನಿಟ್ ವಿದ್ಯುತ್ ಜಾರಿ : ಸಿಎಂ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.