ಕುಡಿಯುವ ನೀರಿಗಾಗಿ ಪ್ರಾಣ ಪಣಕ್ಕಿಟ್ಟು 70 ಅಡಿ ಆಳದ ಬಾವಿಗಿಳಿಯುವ ಜನರು- ವಿಡಿಯೋ
ನಾಸಿಕ್: ಒಂದು ಮಡಕೆ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಜೀವವನ್ನೇ ಪಣಕ್ಕಿಟ್ಟು 70 ಅಡಿ ಆಳದ ಬಾವಿಯೊಳಗೆ ಇಳಿದು ಮಹಿಳೆಯರು ಮತ್ತು ಪುರುಷರು ಹರಸಾಹಸ ಪಡುತ್ತಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪೇಠ್ ತಾಲೂಕಿನ ಗಂಗೋದ್ವಾರಿ ಗ್ರಾಮದಲ್ಲಿ ಕಂಡುಬಂದಿದೆ.
ಬೇಸಿಗೆ ಬಿಸಿಲಿನ ತಾಪ ಹೆಚ್ಚುತ್ತಿದೆ. ನಾಸಿಕ್ ಮತ್ತು ಪೇಠ್ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಇಲ್ಲಿನ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಳದ ಬಾವಿಗಳಿಗೆ ಇಳಿದು ತಮ್ಮ ಬಿಂದಿಗೆ ತುಂಬಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಪ್ರತಿ ದಿನ ಮಹಿಳೆಯರು ಹಗ್ಗದ ಸಹಾಯದಿಂದ 70 ಅಡಿ ಆಳದ ಬಾವಿಯೊಳಗೆ ಇಳಿದು ನೀರು ತುಂಬಿಸುವ ಮೂಲಕ ತಮ್ಮ ಕುಟುಂಬದ ದಾಹವನ್ನು ನೀಗಿಸುತ್ತಿದ್ದಾರೆ. ಈ ವೇಳೆ ಸ್ವಲ್ಪ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗಂಗೋದ್ವಾರಿ ಗ್ರಾಮದ ಸರ್ಪಂಚ್ ಮೋಹನ್ ಗಾವ್ಲಿ, "ನಮ್ಮ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾವಿಯೊಳಗೆ ಇಳಿದೇ ನೀರು ತರಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲಿ" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಜೀವಜಲಕ್ಕಾಗಿ ನಡೆಯಬೇಕು 2 ಕಿಮೀ ದೂರ: ವಿಡಿಯೋ ನೋಡಿ