ಜೀವಜಲಕ್ಕಾಗಿ ನಡೆಯಬೇಕು 2 ಕಿಮೀ ದೂರ: ವಿಡಿಯೋ ನೋಡಿ - water crisis in maharastra village
🎬 Watch Now: Feature Video
ನಾಸಿಕ್(ಮಹಾರಾಷ್ಟ್ರ): ಬೇಸಿಗೆ ಏರುತ್ತಿದೆ. ದೇಶದ ಅಲ್ಲಲ್ಲಿ ನೀರಿನ ಬವಣೆಯೂ ಶುರುವಾಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಬೋರ್ಧಪದ ಗ್ರಾಮಸ್ಥರು ಜೀವಜಲಕ್ಕಾಗಿ ನಿತ್ಯವೂ ಪರದಾಡುತ್ತಿದ್ದಾರೆ. ಗ್ರಾಮಕ್ಕೆ ಯಾವುದೇ ನೀರಿನ ಸಂಪರ್ಕ ಇಲ್ಲ. ಇದ್ದ ಬಾವಿಯೂ ಬತ್ತಿ ಹೋಗಿದೆ. ಇದರಿಂದ ನೀರಿನ ಹಾಹಾಕಾರ ಉಂಟಾಗಿದೆ.
ಬುಡಕಟ್ಟು ಜನಾಂಗದವರು ವಾಸವಿರುವ ಈ ಗ್ರಾಮಕ್ಕೆ ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ ಮಂಜೂರಾಗಿದೆ. ಆದರೆ, ಈವರೆಗೂ ಅದು ಆರಂಭವಾಗಿಲ್ಲ. ಊರಿನಿಂದ 2 ಕಿ.ಮೀ ದೂರದ ಬೆಟ್ಟದಲ್ಲಿರುವ ಬಾವಿಯೇ ಮೂಲಾಧಾರವಾಗಿದೆ. ಮಕ್ಕಳು, ಮಹಿಳೆಯರು ಕಾಡಿನಲ್ಲಿ ನಡೆದುಕೊಂಡು ಬಂದೇ ನೀರು ಕೊಂಡೊಯ್ಯಬೇಕಾಗಿದೆ. ಈ ಮಧ್ಯೆ ಕಾಡಿನಲ್ಲಿ ಒಂಟಿಯಾಗಿ ಓಡಾಡಲು ಪ್ರಾಣಿಗಳ ಭಯವಿದೆ. ಇಷ್ಟು ದೂರ ಸಾಗಿ ನೀರು ತರುವುದು ತ್ರಾಸದಾಯಕ ಎಂಬುದು ಅಲ್ಲಿನ ಮಹಿಳೆಯರ ಅಳಲು.
ನೀರಿನ ಬಿಂದಿಗೆ ಸಮೇತ ಗುಡ್ಡ ಹತ್ತಿ ಇಳಿಯುವಾಗ ಮಹಿಳೆಯರು, ಮಕ್ಕಳು ಗಾಯಗೊಂಡ ಉದಾಹರಣೆಗಳಿವೆ. ಹೀಗಾಗಿ ಗ್ರಾಮಕ್ಕೆ ಮಂಜೂರಾಗಿರುವ ಜಲಜೀವನ್ ಯೋಜನೆಯನ್ನು ಶೀಘ್ರವೇ ಆರಂಭಿಸಬೇಕು ಎಂದು ಅಲ್ಲಿನ ಜನರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯೋಜನೆ ಆರಂಭವಾಗಿದೆ, ಗ್ರಾಮಕ್ಕೆ ನೀರು ಒದಗಿಸಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: 'ನೀವೂ ಪ್ರಧಾನಿಯಾಗಿ..' ಮಕ್ಕಳೊಂದಿಗೆ ಮೋದಿ ಅಕ್ಕರೆಯ ಮಾತುಕತೆ- ವಿಡಿಯೋ