ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಸಾಂಪ್ರದಾಯಿಕ ಪೂಜೆ: ಅರ್ಚಕರ ಮಾತು- ವಿಡಿಯೋ

By ETV Bharat Karnataka Team

Published : Sep 1, 2023, 6:21 PM IST

thumbnail

ಮೈಸೂರು: "ಗಣಪತಿಯ ರೂಪವಾದ ಗಜರಾಜನಿಗೆ ಗಜಪಯಣದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ" ಎಂದು ಕಳೆದ 26 ವರ್ಷಗಳಿಂದ ಗಜಪಡೆಗೆ ಪೂಜೆ ಸಲ್ಲಿಸುತ್ತಾ ಬಂದಿರುವ ಅರ್ಚಕ ಪ್ರಹ್ಲಾದ್ ರಾವ್ ತಿಳಿಸಿದರು. ಗಜಪಯಣದ ಸಂದರ್ಭದಲ್ಲಿ ಯಾವ ರೀತಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ ಎಂಬ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾಹಿತಿ ನೀಡಿದರು.

"ವಿನಾಯಕನ ಪ್ರತ್ಯಕ್ಷ ರೂಪವಾದ ಗಜರಾಜನಿಗೆ ವಿಶೇಷವಾಗಿ ಗಜಪಯಣದ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಪುಷ್ಪಾರ್ಚನೆಗೂ ಮುನ್ನ ಆನೆಗಳನ್ನು ಸಾಲಾಗಿ ನಿಲ್ಲಿಸಿ, ಕಾಲು ತೊಳೆದು, ಅರಿಶಿಣ, ಕುಂಕುಮ, ವಿವಿಧ ಬಗೆಯ ಹೂವುಗಳನ್ನು ಇಟ್ಟು, ಪಾದಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಣಪತಿಗೆ ಇಷ್ಟವಾದ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ರವೆ ಉಂಡೆ, ಪಂಚಫಲಗಳನ್ನಿಟ್ಟು ಗಣಪತಿ ಅರ್ಚನೆ ಮಾಡಲಾಗುತ್ತದೆ" ಎಂದರು. 

"ನಂತರ ಜಿಲ್ಲಾಡಳಿತದ ವತಿಯಿಂದ ಅರಣ್ಯ ಇಲಾಖೆಗೆ ತಾಂಬೂಲ ನೀಡಿ, ಆನೆಗಳನ್ನು ದಸರಾಗೆ ಬರಮಾಡಿಕೊಳ್ಳಲಾಗುತ್ತದೆ. ಆ ನಂತರ ಶುಭಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಕಾಡಿನಿಂದ ದಸರಾಗೆ ಗಜಪಡೆಯನ್ನು ಕರೆತರಲಾಗುತ್ತದೆ. ಹಿಂದೆ ಆನೆಗಳನ್ನು ನಡೆಸಿಕೊಂಡೇ ಮೈಸೂರಿಗೆ ಕರೆತರಲಾಗುತ್ತಿತ್ತು. ಈಗ ಲಾರಿಗಳಲ್ಲಿ ಕರೆದೊಯ್ಯಲಾಗುತ್ತಿದೆ. ಕನ್ಯಾ ಲಗ್ನದಲ್ಲಿ ವಿಶೇಷ ಪೂಜೆ ಮಾಡಿದ್ದೇವೆ. ನವಗ್ರಹಗಳ ರೀತಿಯಲ್ಲಿ 9 ಆನೆಗಳು ಬಂದಿವೆ. ಎಲ್ಲ ಗ್ರಹಗಳು ಒಳ್ಳೆಯದನ್ನೇ ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ" ಎಂದು ತಿಳಿಸಿದರು. 

ಮೈಸೂರಿಗೆ ಬಂದಿಳಿದ ಗಜಪಡೆ: ಗಜಪಯಣದ ಮೂಲಕ ವೀರನಹೊಸಳ್ಳಿಯಿಂದ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರು ನಗರಕ್ಕೆ ಆಗಮಿಸಿವೆ. ಸೆಪ್ಟೆಂಬರ್ 5 ರವರೆಗೆ ಅರಣ್ಯ ಭವನದಲ್ಲಿ ಗಜಪಡೆ ವಾಸ್ತವ್ಯ ಹೂಡಲಿವೆ. ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ವಿಜಯ, ವರಲಕ್ಷ್ಮಿ, ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಕಂಜನ್ ಆನೆಗಳಿದ್ದ ಲಾರಿಗಳು ಮೈಸೂರು ನಗರವನ್ನು ಪ್ರವೇಶ ಮಾಡುತ್ತಿದ್ದಂತೆ ಅವುಗಳಿಗೆ ಪೊಲೀಸ್​ ಭದ್ರತೆಯಲ್ಲಿ ಅರಣ್ಯ ಭವನಕ್ಕೆ ಕರೆತರಲಾಗಿದೆ. ಅರಣ್ಯ ಭವನದಲ್ಲಿ ನಾಲ್ಕು ದಿನ ಆನೆಗಳು, ಮಾವುತರು ಮತ್ತು ಕಾವಾಡಿಗರ ಕುಟುಂಬ ವಾಸ್ತವ್ಯ ಹೂಡಲಿದೆ. ಸೆಪ್ಟೆಂಬರ್ 5ರಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ದಸರಾ ಆಚರಣೆಗೆ ₹30 ಕೋಟಿ ಅನುದಾನ: ಸಚಿವ ಡಾ‌.ಹೆಚ್.ಸಿ.ಮಹದೇವಪ್ಪ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.